ಜನರ ನೋವು ಕೇಳಲು ಸಿನಿಮಾ ಸ್ಟೈಲ್ ನಲ್ಲೇ ಎಂಟ್ರಿ ಕೊಟ್ಟಿದ್ದ ನಟ- ರಾಜಕಾರಣಿ ಪವನ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅತಿವೇಗದ ಚಾಲನೆ ಮತ್ತು ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ನಟ-ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ಇಂದು ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ ವಾರ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿತ್ತು.
ಇಂತಹ ಅತಿವೇಗದ ಚಾಲನೆಯಿಂದಾಗಿ ತನ್ನ ಮೋಟಾರ್ ಬೈಕ್ ಮೇಲೆ ನಿಯಂತ್ರಣ ತಪ್ಪಿ ನಾನು ರಸ್ತೆಗೆ ಬಿದ್ದೆ ಎಂದು ದೂರುದಾರರಾದ ಪಿ ಶಿವಕುಮಾರ್ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಆರೋಪಿಸಿದ್ದಾರೆ. ಡೇರ್ ಡೆವಿಲ್ ಸ್ಟಂಟ್‌ನಲ್ಲಿ ಭಾಗಿಯಾಗಿರುವ ನಟ-ರಾಜಕಾರಣಿ, ಅವರ ಚಾಲಕ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟಂ ಗ್ರಾಮಕ್ಕೆ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಭೇಟಿ ನೀಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಸ್ತೆಗಳ ಅಗಲೀಕರಣಕ್ಕಾಗಿ ಮನೆ, ಅಂಗಡಿಗಳನ್ನು ಕೆಡವಲಾಗಿತ್ತು. ಅಲ್ಲಿನ ಜನರ ನೋವು ಕೇಳಲೆಂದು ಪವನ್ ಕಲ್ಯಾಣ್ ತಮ್ಮ ಕಾರ್ ನ ಮೇಲೆ ಕುಳಿತು ಸಿನಿಮಾ ಸ್ಟಂಟ್ ರೀತಿಯಲ್ಲೇ ಗ್ರಾಮಕ್ಕೆ ಭೇಟಿ ನೀಡಿದ್ದರು.