ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರನ್ನ ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ.
ತಮ್ಮ ಲಗೇಜಿನಲ್ಲಿ ಸಾಗಿಸುತ್ತಿದ್ದ ಕೆಲವು ದುಬಾರಿ ವಾಚ್ಗಳ ಕಾರಣಕ್ಕಾಗಿ ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅವರನ್ನು ವಶಕ್ಕೆ ಪಡೆದಿತ್ತು ಎನ್ನಲಾಗಿದೆ. ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡುವ ಮೊದಲು ಅವರು 6.83 ಲಕ್ಷ ರೂ. ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಾರುಖ್ ಖಾನ್ ಶಾರ್ಜಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಖಾಸಗಿ ಜೆಟ್ನಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಬಂದಿಳಿದಿದ್ದರು.
ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್ನಿಂದ ಹೊರಡುವಾಗ ಬ್ಯಾಗೇಜ್ನಲ್ಲಿ ವಾಚ್ಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಕಸ್ಟಮ್ಸ್ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿಸಿದಾಗ, ಅವರ ಅಂಗರಕ್ಷಕ ಸೇರಿದಂತೆ ಅವರ ಪರಿವಾರದ ಕೆಲವು ಸದಸ್ಯರನ್ನು ಇಡೀ ರಾತ್ರಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು ಮತ್ತು ಬೆಳಿಗ್ಗೆ ಹೊರಡಲು ಅನುಮತಿಸಲಾಯಿತು.
ಸುಮಾರು 18 ಲಕ್ಷ ರೂ. ಮೌಲ್ಯದ ಆರು ದುಬಾರಿ ವಾಚ್ಗಳ ಕವರ್ಗಳು ನಟ ಶಾರುಖ್ ಮತ್ತು ಅವರ ಜೊತೆಗಿದ್ದವರ ಬ್ಯಾಗೇಜ್ನಲ್ಲಿ ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.
ಶಾರುಖ್ ಖಾನ್ ನಿನ್ನೆ ಶಾರ್ಜಾ ಇಂಟರ್ನ್ಯಾಶನಲ್ ಬುಕ್ ಫೇರ್ 2022 ರಲ್ಲಿ ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಸಿನಿಮಾ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಅಂಡ್ ಕಲ್ಚರಲ್ ನೆರೆಟಿವ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.