ನೀವೇನಾದ್ರೂ ಅಗ್ಗದ ಎಲೆಕ್ಟ್ರಿಕ್ ಕಾರ್ಗಾಗಿ ಕಾಯುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಕನಸು ನನಸಾಗಲಿದೆ. ಭಾರತದಲ್ಲಿ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಮುಂಬೈ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಪಿಎಂವಿ ಎಲೆಕ್ಟ್ರಿಕ್, ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಭಾರತಕ್ಕೆ ತರಲಿದೆ. ಕಂಪನಿ ನವೆಂಬರ್ 16 ರಂದು EaS-E ಹೆಸರಿನ ಮೈಕ್ರೋ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಿದೆ.
ಈ ಸಣ್ಣ ಕಾರಿನ ಪ್ರಿ-ಬುಕಿಂಗ್ ಅನ್ನು ಈಗಾಗ್ಲೇ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಗ್ರಾಹಕರು ಈ ವಾಹನವನ್ನು ಅಧಿಕೃತ ವೆಬ್ಸೈಟ್ ಮೂಲಕ ಕೇವಲ 2,000 ರೂಪಾಯಿ ಡೌನ್ ಪೇಮೆಂಟ್ ಮಾಡಿ ಬುಕ್ ಮಾಡಬಹುದು.
ಕಾರಿನ ವಿಶೇಷತೆ
ಗಾತ್ರದಲ್ಲಿ ಇದೊಂದು ಕಾಂಪ್ಯಾಕ್ಟ್ ಕಾರು. 4 ಡೋರ್ಗಳಿವೆ. ಮುಂಭಾಗದಲ್ಲಿ ಕೇವಲ ಒಂದು ಆಸನ ಮತ್ತು ಹಿಂಭಾಗದಲ್ಲಿ ಒಂದು ಸೀಟ್ ಮಾತ್ರ ಇರಲಿದೆ. ಇದು ರಿಮೋಟ್ ಪಾರ್ಕಿಂಗ್ ಅಸಿಸ್ಟ್, ರಿಮೋಟ್ ಕೀ ಕನೆಕ್ಟಿವಿಟಿ, ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮತ್ತು ಕ್ರೂಸ್ ಕಂಟ್ರೋಲ್ನಂತಹ ಫೀಚರ್ಗಳನ್ನು ಹೊಂದಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿಮೋಟ್ ಕೀಲೆಸ್ ಎಂಟ್ರಿ, ಪವರ್ ವಿಂಡೋಗಳು ಮತ್ತು ರೇರ್ ವ್ಯೂ ಕ್ಯಾಮೆರಾದಂತಹ ಫೀಚರ್ಗಳನ್ನೂ ಅಳವಡಿಸಲಾಗಿದೆ.
3 kW AC ಚಾರ್ಜರ್ ಮೂಲಕ ಈ ವಾಹನವನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದರ ಬ್ಯಾಟರಿ ಬಾಳಿಕೆ 5-8 ವರ್ಷಗಳವರೆಗೆ ಇರುತ್ತದೆ.
ಈ ಕಾರಿನ ವೀಲ್ ಬೇಸ್ 2,087 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಇರಲಿದೆ. ಈ ಕಾರು ಮೂರು ರೂಪಾಂತರಗಳಲ್ಲಿ ಲಭ್ಯವಾಗಲಿದೆ. 120 ಕಿಮೀ, 160 ಕಿಮೀ ಮತ್ತು 200 ಕಿಮೀ ವ್ಯಾಪ್ತಿಯನ್ನು ಇವು ಹೊಂದಿರಲಿವೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆ 4 ರಿಂದ 6 ಲಕ್ಷ ರೂಪಾಯಿವರೆಗೆ ಇರಬಹುದು. ಸದ್ಯ ಟಾಟಾ ಟಿಗೋರ್ ಇವಿ ಅಗ್ಗದ ಎಲೆಕ್ಟ್ರಿಕ್ ಕಾರು, ಇದರ ಬೆಲೆ 8.49 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.