ಮೂತ್ರಪಿಂಡದಲ್ಲಿದ್ದ ಕಲ್ಲು ತೆಗೆಸಿಕೊಳ್ಳಲು ಹೋದ ವ್ಯಕ್ತಿಯ ಮೂತ್ರಪಿಂಡವನ್ನೇ ತೆಗೆದುಹಾಕಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ 53 ವರ್ಷದ ಹೋಮ್ ಗಾರ್ಡ್ ಇತ್ತೀಚೆಗೆ ಅಲಿಘರ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಕಲ್ಲು ತೆಗೆಸಲು ಹೋಗಿದ್ದಾರೆ. ಆದರೆ ಈ ವೇಳೆ ಅವರ ಎಡ ಮೂತ್ರಪಿಂಡವನ್ನು ತೆಗೆದುಹಾಕಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಕಾಸ್ಗಂಜ್‌ನಲ್ಲಿರುವ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಚೇರಿಯಲ್ಲಿ ನಿಯೋಜಿತರಾಗಿರುವ ಸುರೇಶ್ ಚಂದ್ರ ಅವರು ಇತ್ತೀಚೆಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವನ್ನು ಅನುಭವಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅಲ್ಟ್ರಾಸೌಂಡ್ ವರದಿಯಲ್ಲಿ ಅವರ ಎಡ ಮೂತ್ರಪಿಂಡ ಕಾಣೆಯಾಗಿದೆ ಎಂದು ತೋರಿಸಿದೆ. ಸಂತ್ರಸ್ತರಿಂದ ಮಾಹಿತಿ ಪಡೆದ ಸಿಡಿಒ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಕಸ್ಗಂಜ್ ಜಿಲ್ಲೆಯ ನಾಗ್ಲಾ ತಾಲ್ ಗ್ರಾಮದ ನಿವಾಸಿ ಸುರೇಶ್ ಗೆ ಏಪ್ರಿಲ್ 14 ರಂದು ಶಸ್ತ್ರಚಿಕಿತ್ಸೆಗೆ ಮುನ್ನ ಅಲ್ಟ್ರಾಸೌಂಡ್ ನಡೆಸಲಾಯಿತು. ವರದಿಯಲ್ಲಿ ಕಿಡ್ನಿ ಸ್ಟೋನ್ ಇರುವುದು ಪತ್ತೆಯಾಯಿತು. ಕಾಸ್‌ಗಂಜ್‌ನ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನ ಬಿಲ್ಲಿಂಗ್ ಕೌಂಟರ್‌ನಲ್ಲಿರುವ ವ್ಯಕ್ತಿ ನನ್ನನ್ನು ಅಲಿಗಢ್‌ನ ಕ್ವಾರ್ಸಿ ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು ನಾನು ಆಸ್ಪತ್ರೆಗೆ ಎಪ್ರಿಲ್ 14 ರಂದೇ ದಾಖಲಾದೆ. ಅದೇ ದಿನ ಆಪರೇಷನ್ ನಡೆಸಲಾಯಿತು. ನಿಮ್ಮ ಮೂತ್ರಪಿಂಡದಲ್ಲಿದ್ದ ಕಲ್ಲನ್ನು ತೆಗೆದುಹಾಕಲಾಗಿದೆ ಎಂದು ವೈದ್ಯರು ಔಷಧಿಗಳ ಪಟ್ಟಿಯನ್ನು ನೀಡಿ ನನ್ನನ್ನು ಏಪ್ರಿಲ್ 17 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು ಎಂದು ಸಂತ್ರಸ್ತ ಸುರೇಶ್ ತಿಳಿಸಿದ್ದಾರೆ.
ಬಳಿಕ ಅಕ್ಟೋಬರ್ 29 ರಂದು ನನ್ನ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದ್ದರಿಂದ ನಾನು ಕಾಸ್ಗಂಜ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿದೆ. ಅವರು ನನ್ನ ಹಿಂದಿನ ವರದಿಗಳನ್ನು ನೋಡಿದ ನಂತರ ಮತ್ತು ನನ್ನ ಹೊಟ್ಟೆಯ ಎಡಭಾಗದಲ್ಲಿ ಉದ್ದವಾದ ಅಡ್ಡ ಶಸ್ತ್ರಚಿಕಿತ್ಸೆಯ ಗುರುತು (ಹೊಲಿಗೆ ಗುರುತು) ಬಗ್ಗೆ ಪ್ರಶ್ನಿಸಿದ ನಂತರ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುವಂತೆ ತಿಳಿಸಿದರು. ಸ್ಕ್ಯಾನಿಂಗ್ ವರದಿಯಲ್ಲಿ ಎಡಭಾಗದ ಕಿಡ್ನಿ ಕಾಣೆಯಾಗಿದೆ ಎಂದು ತಿಳಿದು ದಿಗ್ಭ್ರಾಂತರಾಗಿ ಖಾಸಗಿ ಆಸ್ಪತ್ರೆಗೆ ಕರೆ ಮಾಡಿ, ಕಲ್ಲು ತೆಗೆಯುವ ನೆಪದಲ್ಲಿ ವೈದ್ಯರು ಕಿಡ್ನಿ ಕದ್ದೊಯ್ದರೂ ಸೂಕ್ತ ಪ್ರತಿಕ್ರಿಯೆ ಬಾರದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಇಡೀ ಘಟನೆಯ ಬಗ್ಗೆ ಅವರು ನನಗೆ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಸುರೇಶ್ ಹೇಳಿದರು.
ಖಾಸಗಿ ಆಸ್ಪತ್ರೆಯ ವೈದ್ಯರು ಮೊದಲು ಏಪ್ರಿಲ್ 15 ಕ್ಕೆ ಆಪರೇಷನ್ ನಿಗದಿಪಡಿಸಿದ್ದರು. ಆದರೆ ಅವರು ನನ್ನ ಸಂಬಂಧಿಕರು ಬರುವವರೆಗೆ ಕಾಯಲು ನಿರಾಕರಿಸಿ ಒಂದು ದಿನ ಮುಂಚಿತವಾಗೇ ತರಾತುರಿಯಲ್ಲಿ ಆಪರೇಷನ್ ಮಾಡಿದರು. ನಾನು ಅರಿವಳಿಕೆಯಲ್ಲಿದ್ದ ಕಾರಣ ಆಪರೇಷನ್ ಮಾಡಿದ ವೈದ್ಯರ ಗುರುತನ್ನು ನಿಖರವಾಗಿ ನೆನಪಿಸಿಕೊಳ್ಳಲು ಆಗುತ್ತಿಲ್ಲ. 28,000 ರೂಪಾಯಿ ಬಿಲ್ ಪಾವತಿಸಿ ನನ್ನನ್ನು ಡಿಸ್ಚಾರ್ಜ್ ಮಾಡುವ ಮೊದಲು ನನ್ನ ಕುಟುಂಬ ಸದಸ್ಯರಿಗೂ ನನ್ನನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತ ಸುರೇಶ್ ಆರೋಪಿಸಿದ್ದಾರೆ.