ಶುಕ್ರವಾರ ನಡೆದ ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಚಿನ್ನದ ಪದಕ ಗೆದ್ದಿದ್ದಾರೆ.
ಅವರು ಮಹಿಳೆಯರ ವಿಭಾಗದ 75 ಕೆಜಿ ವಿಭಾಗದಲ್ಲಿ ಜಯ ದಾಖಲಿಸಿದರು. ಇತರ ಪಂದ್ಯಗಳಲ್ಲಿ ಮಿನಾಕ್ಷಿ 52 ಕೆಜಿ ವಿಭಾಗದಲ್ಲಿ ಬೆಳ್ಳಿಗೆ ತೃಪ್ತಿಪಟ್ಟರೆ, 63 ಕೆಜಿ ವಿಭಾಗದಲ್ಲಿ ಪರ್ವೀನ್ ಚಿನ್ನಕ್ಕೆ ಕೊರಳೊಡ್ಡಿದರು.
ಲೊವ್ಲಿನಾ ಬೊರ್ಗೊಹೈನ್ ಅವರು ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಚಿನ್ನವನ್ನು ಗಳಿಸಿದ್ದು, ಪರ್ವೀನ್ ಹೂಡಾ 63 ಕೆಜಿ ಏಷ್ಯನ್ ಚಾಂಪಿಯನ್ ಶಿಪ್‌ನಲ್ಲಿ ಪ್ರಶಸ್ತಿಯನ್ನು ಪಡೆದರು.
ಒಲಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ 75 ಕೆಜಿ ವಿಭಾಗದಲ್ಲಿ ತಮ್ಮ ಚೊಚ್ಚಲ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಉಜ್ಬೇಕಿಸ್ತಾನ್‌ನ ರುಜ್ಮೆಟೋವಾ ಸೊಖಿಬಾ ವಿರುದ್ಧ 5-0 ಅವಿರೋಧ ನಿರ್ಧಾರವನ್ನು ಗೆದ್ದರೆ, ಪರ್ವೀನ್ ಜಪಾನ್‌ನ ಕಿಟೊ ಮಾಯ್ ವಿರುದ್ಧ ಇದೇ ಅಂತರದಿಂದ ಸುಲಭ ಜಯ ಸಾಧಿಸಿದರು.
ಮತ್ತೊಂದೆಡೆ, ಮಿನಾಕ್ಷಿ ಅವರು ಫ್ಲೈವೇಟ್ ವಿಭಾಗದಲ್ಲಿ(52 ಕೆಜಿ) ಬೆಳ್ಳಿ ಪದಕವನ್ನು ಪಡೆಯುವ ಮೂಲಕ ತಮ್ಮ ಚೊಚ್ಚಲ ಏಷ್ಯನ್ ಚಾಂಪಿಯನ್‌ಶಿಪ್ ಅಭಿಯಾನ ಮುಕ್ತಾಯಗೊಳಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ನಂತರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ 25 ವರ್ಷದ ಲೊವ್ಲಿನಾಗೆ ಈ ಗೆಲುವು ದೊಡ್ಡ ನೈತಿಕ ಬೂಸ್ಟರ್ ಆಗಿದೆ.