ಭುವನೇಶ್ವರ (ಒಡಿಶಾ): ಕಾಡಿನೊಳಕ್ಕೆ ಹೋದ ಗ್ರಾಮಸ್ಥರು ಮದ್ಯ ತಯಾರಿಸಿ ಅದನ್ನು ಅಲ್ಲಿಯೇ ಹುದುಗಿಸಿಟ್ಟು ಬಂದರೆ, ಅಲ್ಲಿಗೆ ನುಗ್ಗಿದ ಆನೆಗಳ ಗುಂಪು ಕಂಠಪೂರ್ತಿ ಮದ್ಯ ಕುಡಿದು ಅಮಲಿನಲ್ಲಿ ತೇಲಿರುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.
ಶಿಲಿಪದವು ಗೋಡಂಬಿ ಕಾಡಿನ ಬಳಿ ವಾಸಿಸುವ ಗ್ರಾಮಸ್ಥರು ‘ಮಹುವಾ’ ಎಂಬ ಹಳ್ಳಿಗಾಡಿನ ಮದ್ಯವನ್ನು ತಯಾರಿಸಲು ಕಾಡಿನೊಳಗೆ ಹೋಗಿದ್ದು, ಅಲ್ಲಿ ಮದ್ಯ ತಯಾರಿಸಿ ಮಣ್ಣಿನಲ್ಲಿ ಹುದುಗಿಸಿ ಇಟ್ಟಿದ್ದರು. ಅಲ್ಲಿಗೆ ಲಗ್ಗೆ ಇಟ್ಟ 24 ಆನೆಗಳ ಹಿಂಡು ಅರಿಯದೇ ಅದನ್ನು ಕುಡಿದು ಬಿಟ್ಟಿದೆ.
ಮಾರನೆಯ ದಿನ ಗ್ರಾಮಸ್ಥರು ಮದ್ಯ ಹುದುಗಿಸಿಟ್ಟ ಜಾಗಕ್ಕೆ ಹೋದಾಗ ಅವರು ಕಂಡದ್ದು ಗಾಢ ನಿದ್ದೆಯಲ್ಲಿದ್ದ 24 ಆನೆಗಳನ್ನು ! ಅದನ್ನು ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಂಠಪೂರ್ತಿ ಮದ್ಯ ಸೇವನೆ ಬಳಿಕ ಎಲ್ಲಾ ಆನೆಗಳು ದೊಡ್ಡ ಕುಂಡಗಳ ಬಳಿ ಹೋಗಿ ಹಾಯಾಗಿ ಮಲಗಿಕೊಂಡಿದ್ದು, ಅವುಗಳ ಫೋಟೋ ವೈರಲ್ ಆಗಿದೆ.
ಈ ಆನೆಗಳ ಪೈಕಿ ಆರು ಹೆಣ್ಣು ಆನೆಗಳು ಮತ್ತು ಒಂಬತ್ತು ಮರಿಯಾನೆಗಳು ಇರುವುದಾಗಿ ವರದಿಯಾಗಿದೆ. ಇವುಗಳು ಏನು ಮಾಡಿದರೂ ಏಳದ ಕಾರಣ, ಗ್ರಾಮಸ್ಥರು ಹೆದರಿ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಅವರು ಬಂದು ಅನೆಗಳನ್ನು ಏಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಫೋಟೋಗೆ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದು, ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.