ಶುಂಠಿ ಔಷಧವೂ ಹೌದು, ಅಡುಗೆಯ ರುಚಿ ಹೆಚ್ಚಿಸಬಲ್ಲ ಅದ್ಭುತ ಮಸಾಲೆಯೂ ಹೌದು. ಕೆಲವರ ಪಾಲಿಗಂತೂ ಶುಂಠಿ ಇಲ್ಲದ ಚಹಾ ಅಪೂರ್ಣ. ಆದರೆ ಮಾರುಕಟ್ಟೆಗಳಲ್ಲಿ ನಕಲಿ ಶುಂಠಿಯ ಮಾರಾಟ ದಂಧೆ ಹೆಚ್ಚಾಗುತ್ತಿದೆ.
ಈ ನಕಲಿ ಶುಂಠಿ ನಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಲಾಭ ಗಳಿಸಲು ಮಾರುಕಟ್ಟೆಯಲ್ಲಿ ಅಸಲಿಯಂತೆಯೇ ಕಾಣುವ ನಕಲಿ ಶುಂಠಿಯನ್ನು ಮಾರಾಟ ಮಾಡಲಾಗುತ್ತಿದೆ. ನಕಲಿ ಮತ್ತು ನಿಜವಾದ ಶುಂಠಿಯ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ. ಹಾಗಾಗಿ ಶುಂಠಿ ಅಸಲಿಯೋ ನಕಲಿಯೋ ಎಂಬುದನ್ನು ಪತ್ತೆ ಮಾಡಲು ಕೆಲವು ಟ್ರಿಕ್ಸ್ ಇಲ್ಲಿದೆ.
ನಕಲಿ ಶುಂಠಿ ಎಂದರೇನು ?
ನಿಜವಾದ ಶುಂಠಿಯಂತೆ ಕಾಣುವ ಈ ವಸ್ತುವು ಬೆಟ್ಟದ ಮರದ ಭಾಗವಾಗಿದೆ. ತಹರ್ ಎಂಬ ಮರದ ತುಂಡು ಥೇಟ್ ಶುಂಠಿಯಂತೆಯೇ ಕಾಣುತ್ತದೆ. ಅದನ್ನು ಒಣಗಿಸಿ ನೈಜ ಶುಂಠಿಯೊಂದಿಗೆ ಬೆರೆಸಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಗುರುತಿಸುವುದು ಹೇಗೆ ?
ಶುಂಠಿಯನ್ನು ಪತ್ತೆ ಮಾಡುವ ಪ್ರಮುಖ ಅಂಶವೆಂದರೆ ಅದರ ಪರಿಮಳ. ಶುಂಠಿ ಅಸಲಿಯೋ ನಕಲಿಯೋ ಎಂಬುದನ್ನು ತಿಳಿಯಲು ವಾಸನೆ ನೋಡಿ. ಶುಂಠಿಯ ವಾಸನೆ ಇಲ್ಲದೇ ಇದ್ದಲ್ಲಿ ಅದು ನಕಲಿ ಎಂಬುದು ಖಚಿತ. ಶುಂಠಿ ನೆಲದಡಿಯಲ್ಲಿ ಬೆಳೆಯುತ್ತದೆ. ಈ ಕಾರಣದಿಂದಾಗಿ ಶುಂಠಿಯಲ್ಲಿ ಸ್ವಲ್ಪ ಮಣ್ಣು ಉಳಿದುಕೊಂಡಿರುತ್ತದೆ. ಅದು ತುಂಬಾ ಶುಚಿಯಾಗಿ ಕಂಡರೆ, ಮಣ್ಣಿನ ಕುರುಹು ಮತ್ತು ಪರಿಮಳ ಇಲ್ಲದೇ ಇದ್ದರೆ ಅದು ನಕಲಿ ಎಂಬುದು ದೃಢಪಡುತ್ತದೆ.
ಶುಂಠಿಯನ್ನು ಗುರುತಿಸಲು ಅಂಗಡಿಯಲ್ಲಿಯೇ ಅದನ್ನು ಕತ್ತರಿಸಿ. ಒಳಭಾಗದಲ್ಲಿ ನಾರುಗಳು ಕಂಡುಬರದಿದ್ದರೆ ಅದು ನಕಲಿ ಶುಂಠಿ. ನಿಜವಾದ ಶುಂಠಿಯೊಳಗೆ ಹೆಚ್ಚಿನ ಪ್ರಮಾಣದಲ್ಲಿ ನಾರು ಇರುತ್ತದೆ. ಇದಲ್ಲದೆ ಶುಂಠಿಯನ್ನು ಸ್ವಲ್ಪ ತಿಂದು ನೋಡಿ ರುಚಿಯನ್ನು ಪರೀಕ್ಷಿಸಬಹುದು. ಈ ಮೂಲಕವೂ ನಕಲಿ ಶುಂಠಿಯನ್ನು ಪತ್ತೆ ಮಾಡಬಹುದು.