ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಾದ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು 33 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ.
ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ನಳಿನಿ ಅಲ್ಲದೆ 1991 ರ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗಾಗಿ ಜೈಲು ಪಾಲಾಗಿ ಬಿಡುಗಡೆಯಾಗಿರುವ ಇತರರೆಂದರೆ ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್.
ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನೆರೆಯ ಶ್ರೀಲಂಕಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ನಿಂದ ಹತ್ಯೆಗೀಡಾದರು. ಹತ್ಯೆಯಲ್ಲಿನ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಯಿತು.
2000 ರಲ್ಲಿ, ರಾಜೀವ್ ಗಾಂಧಿ ಅವರ ಪತ್ನಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆಯ ಮೇಲೆ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು. 2008 ರಲ್ಲಿ, ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವೆಲ್ಲೂರು ಜೈಲಿನಲ್ಲಿ ಭೇಟಿಯಾಗಿದ್ದರು.
ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.