ಅದು ಮದುವೆ ಅಥವಾ ಅನ್ನದ ಸಮಾರಂಭವಾಗಿರಲಿ, ಬಂಗಾಳಿಗಳು ಆಚರಿಸುವ ಯಾವುದೇ ಶುಭ ಸಮಾರಂಭವು ಸಿಹಿತಿಂಡಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅವುಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾದದ್ದು ರಸಗುಲ್ಲಾ.
ರಸಗುಲ್ಲಾ ಎಂದರೆ ಬಹುತೇಕ ಮಂದಿಯ ಬಾಯಲ್ಲಿ ನೀರೂರುತ್ತದೆ. ಆದರೆ ಇದರ ದುಬಾರಿ ಬೆಲೆ ನೋಡಿ ಮಾತ್ರ ಕೆಲವರು ಇದರ ಉಸಾಬರಿಯೇ ಬೇಡ ಎನ್ನುವಂತಾಗಿದೆ. ಆದರೆ ಕೇವಲ ಮೂರೇ ರೂಪಾಯಿಗಳಲ್ಲಿ ರುಚಿರುಚಿ ರಸಗುಲ್ಲಾ ಸಿಕ್ಕಿಬಿಟ್ಟರೆ?
ಇದೇನು ತಮಾಷೆ ಎನ್ನಬೇಡಿ. ಪಶ್ಚಿಮ ಬಂಗಾಳದ ಹೌರಾದ ಬಗ್ನಾನ್ನಲ್ಲಿ ಪ್ರತಿ ರಸಗುಲ್ಲಾಕ್ಕೆ ಮೂರು ರೂಪಾಯಿ ನೀಡಲಾಗುತ್ತಿದೆ ! ತಪನ್ ಸಮಂತಾ ಅವರ ಸ್ವೀಟ್ ಶಾಪ್ ಹೌರಾ ಬಗ್ನಾನ್ ಹರಿನಾರಾಯಣಪುರ ಬಜಾರ್ನಲ್ಲಿದೆ. ಸಂಜೆ ಬಿಸಿ ಬಿಸಿ ರಸಗುಲ್ಲಾ ಜತೆ ಇಲ್ಲಿಯ ಸಾಂಪ್ರದಾಯಿಕ ಸಿಹಿಗಳಾದ ಪಾಂಟುವಾ ಮತ್ತು ಲಾಂಗ್ಚಾ ಕೂಡ ಕೇವಲ 3 ರೂ.ಗೆ ನೀಡಲಾಗುತ್ತದೆ.
ಕಳೆದ ಹಲವು ವರ್ಷಗಳಿಂದ ಈ ದರದಲ್ಲಿ ಹಲವು ತಿನಿಸುಗಳು ಸಿಗುತ್ತವೆ. ನೀರು ತರುವುದರಿಂದ ಹಿಡಿದು ಸಿಹಿತಿಂಡಿ ಮಾಡುವವರೆಗೆ ಅಂಗಡಿಯಲ್ಲಿನ ಎಲ್ಲ ಕೆಲಸಗಳನ್ನೂ ಒಬ್ಬರೇ ನಿರ್ವಹಿಸುತ್ತಿದ್ದರೂ ಇಷ್ಟು ಕಡಿಮೆ ಬೆಲೆಗೆ ನೀಡುತ್ತಿರುವುದು ವಿಶೇಷ. ಈ ರಸಗುಲ್ಲಾ ಸೇವಿಸಲು ಮೂಲೆಮೂಲೆಗಳಿಂದ ಜನರು ಬರುತ್ತಾರೆ.