ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ವಂದೇ ಭಾರತ್ ರೈಲು ಹಾಗೂ ಭಾರತ್ ಗೌರವ್ ಕಾಶಿ ರೈಲಿಗೆ ಚಾಲನೆ ನೀಡಿದರು.
ಶಾಸಕರ ಭವನದ ಬಳಿ ಕನಕದಾಸರ ಪ್ರತಿಮೆಗೆ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಲ್ಲಿಂದ ಕೆ ಎಸ್ ಆರ್ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಸಾವಿರಾರು ಜನರು ಮೋದಿ ಮೋದಿ ಎಂಬ ಜಯಘೋಷಗಳೊಂದಿಗೆ ಸ್ವಾಗತಿಸಿದರು. ವಾಹನದಿಂದ ಇಳಿದು ಜನರತ್ತ ಕೈಬೀಸುತ್ತ ಕೆಲ ಕಾಲ ನಿಂತ ಪ್ರಧಾನಿ ಮೋದಿ ಬಳಿಕ ಜನರಿಗೆ ಕೈಮುಗಿದು ತೆರಳಿದರು.
ಬಳಿಕ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ ವಂದೇ ಭಾರತ್ ರೈಲು ಹಾಗೂ ಭಾರತ್ ಗೌರವ್ ಕಾಶಿ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ಲಾಟ್ ಫಾರಂ ನಂ. 7ರಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಬಳಿಕ ಪ್ಲಾಟ್ ಫಾರ್ಮ್ 8ರಲ್ಲಿ ಭಾರತ್ ಗೌರವ್ ಕಾಶಿ ರೈಲಿಗೆ ಹಸಿರು ನಿಶಾನೆ ತೋರಿದರು.
ವಂದೇ ಭಾರತ್ ರೈಲು ಬೆಂಗಳೂರಿನಿಂದ ಮೈಸೂರು ಮೂಲಕ ಚೆನ್ನೈಗೆ ತೆರಳಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಪಡಿಸಲಾಗಿರುವ ಈ ರೈಲು ಅತ್ಯಂತ ವೇಗವಾಗಿ ಚಲಿಸಲಿದ್ದು, ಹಲವು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಭಾರತ್ ಗೌರವ್ ಕಾಶಿ ರೈಲು ರಾಜ್ಯದ ಜನತೆಗಾಗಿ ಕಾಶಿ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಆರಂಭವಾಗಿರುವ ವಿಶೇಷ ರೈಲು ಇದಾಗಿದೆ.
ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶ್ರೀರಾಮುಲು ಉಪಸ್ಥಿತರಿದ್ದರು.