ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದು, ಹೆಚ್ಎಎಲ್ ಏರ್ಪೋರ್ಟ್ ಗೆ ಆಗಮಿಸಿದ್ದಾರೆ.
ಬೆಂಗಳೂರಿಗೆ ಬಂದಿಳಿದ ಪ್ರಧಾನಿಯವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿದ್ದಾರೆ.
ಹೆಚ್.ಎಎಲ್ ಏರ್ಪೋರ್ಟ್ ನಿಂದ ಪ್ರಧಾನಿಯವರು ಹೆಲಿಕಾಪ್ಟರ್ ನಲ್ಲಿ ಮೇಖ್ತಿ ಸರ್ಕಲ್ ಹೆಲಿಪ್ಯಾಡ್ ಗೆ ಬಂದಿದ್ದಾರೆ. ಶಾಸಕರ ಭವನಕ್ಕೆ ತೆರಳಿ, ವಿಧಾನಸೌಧದ ಬಳಿ ವಾಲ್ಮೀಕಿ ಪ್ರತಿಮೆ, ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಅವರು ನಂತರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್ 2 ಲೋಕಾರ್ಪಣೆ ಮಾಡಲಿದ್ದು, ಮಧ್ಯಾಹ್ನ 12 ಗಂಟೆಗೆ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.