ಎಷ್ಟೋ ಸಿನೆಮಾಗಳು ನೈಜ ಘಟನೆ ಆಧಾರಿತವಾಗಿರುತ್ತೆ. ಆದರೆ ಇತ್ತೀಚೆಗೆ ಜನರು ಸಿನೆಮಾಗಳಿಂದ ಇನ್ಸ್ಪಾಯರ್ ಆಗಿರ್ತಾರೆ. ಇಲ್ಲೊಬ್ಬ ಕಳ್ಳ ಢೋಲ್ ಸಿನೆಮಾದಲ್ಲಿ ಬರುವ ಸೀನ್ನಂತೆ ಕಳ್ಳತನದ ಹಣವನ್ನ ಮುಚ್ಚಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸಿನೆಮಾಗಳು ಅಪರಾಧ ಮಾಡುವುದಕ್ಕೂ ಪ್ರಚೋದಿಸುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಯುವಕನೊಬ್ಬ ಸೇಮ್ ಟು ಸೇಮ್ ಸಿನೆಮಾ ಸ್ಟೈಲ್ನಲ್ಲಿ ಕಳ್ಳತನ ಮಾಡಿದ್ದಾನೆ. ‘ಢೋಲ್’ 2007 ರಲ್ಲಿ ತೆರೆಕಂಡ ಬಾಲಿವುಡ್ ಸಿನೆಮಾ. ಈ ಸಿನೆಮಾದಲ್ಲಿ ಕಳ್ಳತನ ಮಾಡಿರುವ ದುಡ್ಡನ್ನ ಢೋಲ್ನಲ್ಲಿ ಮುಚ್ಚಿಟ್ಟಿರಲಾಗುತ್ತೆ. ’ಯುಪಿ ತಕ್’ ಟ್ವಿಟ್ಟರ್ ಅಕೌಂಟ್ನಲ್ಲಿ ಮೂರು ನಿಮಿಷದ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಪವನ್ಕುಮಾರ್ ಶರ್ಮಾ, ದೆಹಲಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಮಾಲೀಕನ ಬಳಿ ಇರುವ 18 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ತಕ್ಷಣವೇ ದೆಹಲಿ ಪೊಲೀಸ್ಗೆ ಕಂಪ್ಲೇಂಟ್ ಮಾಡಿದ್ದಾರೆ.
ತಕ್ಷಣವೇ ಕಳ್ಳನ ಹುಡುಕಾಟ ಆರಂಭಿಸಿದ ಪೊಲೀಸರು, ಯುಪಿಯ ಪಿಲಿಭಿತ್ನಲ್ಲಿರುವ ಪವನ್ಕುಮಾರ್ ಮನೆಯನ್ನ ಪತ್ತೆ ಮಾಡಿ, ಅಲ್ಲಿಯೇ ಅಡಗಿಕೊಂಡಿದ್ದ ಆತನನ್ನ ಬಂಧಿಸಲಾಗಿದೆ. ಆ ನಂತರ ನಡೆಸಿದ ವಿಚಾರಣೆಯಲ್ಲಿ ಆತ ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಲ್ಲದೇ, ಅದನ್ನ ಎಲ್ಲಿ ಇಟ್ಟಿದ್ದಾನೆ ಅನ್ನೋದನ್ನೂ ಹೇಳಿದ್ದ.
ಪವನ್ಕುಮಾರ್ ಮನೆಯಲ್ಲಿ ಕೆಲ ಜನಪದ ಸಂಗೀತದಲ್ಲಿ ಬಳಸಲಾಗುವ ಎರಡು ಪುಟ್ಟ ಢೋಲ್ಗಳಿದ್ದವು. ಅದೇ ಢೋಲ್ ಒಳಗೆ ಈತ ಕದ್ದ ಹಣವನ್ನ ಬಚ್ಚಿಟ್ಟಿದ್ದ. ಈ ಢೋಲ್ ಒಡೆದು ನೋಡಿದಾಗ ಅಲ್ಲಿ ಕದ್ದ ಹಣ ಇಟ್ಟಿರುವುದನ್ನ ನೋಡಿ ಪೊಲೀಸರು ಶಾಕ್ ಆಗಿದ್ದರು. ಈತನಿಗೆ ಸಿನೆಮಾ ನೋಡಿಯೇ ಆ ಐಡಿಯಾ ಬಂದಿದ್ದು ಅಂತ ಆತನೇ ಖುದ್ದು ಹೇಳಿಕೊಂಡಿದ್ದಾನೆ.