ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರತಿಮೆ ಅನಾವರಣ ಮಾಡುತ್ತಿರುವುದು ಸಂತಸದ ವಿಚಾರ ಆದರೆ ಈ ಯೋಜನೆ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು ಏರ್ ಪೋರ್ಟ್ ಗೆ ಕೆಂಪೇಗೌಡ ಹೆಸರಿಟ್ಟಿದ್ದು ಯಾರು? ಹೆಸರಿಟ್ಟ ಮೇಲೆ ಅಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ತೀರ್ಮಾನಿಸಿದ್ದು ಯಾರು ? ಪ್ರಾಧಿಕಾರ ರಚನೆ ಮಾಡಿದ್ದು ಯಾರು ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಈ ಯೋಜನೆಯನ್ನು ಮಾಡಲಾಗಿತ್ತು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ಅನಾವರಣ ಸಂತೋಷದ ವಿಚಾರ ಎಂದರು.
ರಾಜ್ಯ ಹಾಗೂ ಕೇಂದ್ರ ಎರಡರಲ್ಲಿಯೂ ಬಿಜೆಪಿ ಸರ್ಕಾರವೇ ಇದೆ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಪ್ರಧಾನಿ ಮೋದಿ ರಾಜ್ಯದ ಜನರ ಸಮಸ್ಯೆಗೆ ಯಾಕೆ ಸ್ಪಂದಿಸಿಲ್ಲ? ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ನೇಮಕಾತಿ ಹಗರಣಗಳು ನಡೆಯುತ್ತಿವೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ?. 40% ಕಮಿಷನ್ ಗೆ ಪ್ರಧಾನಿ ಮೋದಿ ಯಾಕೆ ಮೌನವಾಗಿದ್ದಾರೆ? ನಾನು ಅಧಿಕಾರದಲ್ಲಿದ್ದಾಗ 10% ಕಮಿಷನ್ ಸರ್ಕಾರ ಎಂದು ಮೋದಿ ಆರೋಪ ಮಾಡಿದರು ಬಿಜೆಪಿಯ 40% ಕಮಿಷನ್ ಸರ್ಕಾರದ ಬಗ್ಗೆ ಯಾಕೆ ಮಾತಾಡ್ತಿಲ್ಲ? ಗುತ್ತಿದೆದಾರರ ಸಂಘ ಪ್ರಧಾನಿಯವರಿಗೆ ಪತ್ರ ಬರೆದರೂ ಯಾವುದೇ ಉತ್ತರವೂ ಇಲ್ಲ, ಕ್ರಮವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.