ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಬೇಕೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.
ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ಭಾರತ ತಂಡವನ್ನು ನಿರಾಯಾಸವಾಗಿ ಮಣಿಸಿದ ಇಂಗ್ಲೆಂಡ್ ಪೈನಲ್ ತಲುಪಿದೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. 6 ವಿಕೆಟ್ ನಷ್ಟಕ್ಕೆ ಕೇವಲ 168 ರನ್ ಗಳಿಸಲಷ್ಟೇ ಶಕ್ತವಾಯ್ತು. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕೇವಲ 5 ರನ್ ಗಳಿಸಿ ಔಟಾದರು. ತಂಡಕ್ಕೆ ಆಧಾರವಾದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದ್ರು.
ಹಾರ್ದಿಕ್ ಪಾಂಡ್ಯಾರ ಬಿರುಸಿನ ಆಟದ ನೆರವಿನಿಂದ ಭಾರತ ಸಮಾಧಾನಕರ ಸ್ಕೋರ್ನತ್ತ ಸಾಗಿತು. ಪಾಂಡ್ಯ 29 ಬಾಲ್ಗಳಲ್ಲಿ 50 ರನ್ ಗಳಿಸುವ ಮೂಲಕ ಗಮನ ಸೆಳೆದರು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ ಮೂರು ವಿಕೆಟ್ ಕಬಳಿಸಿದ್ರು.
ಅಲ್ಪ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಿರಾಯಾಸ ಗೆಲುವನ್ನು ದಾಖಲಿಸಿದೆ. ಆರಂಭಿಕರಾದ ಜಾಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಬಟ್ಲರ್ 80 ರನ್ ಗಳಿಸಿದ್ರೆ, ಅಲೆಕ್ಸ್ 86 ರನ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಎನಿಸಿಕೊಂಡ್ರು.
ಟೀಂ ಇಂಡಿಯಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ಫೈನಲ್ ಗೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ತಂಡವನ್ನು ಮಣಿಸಿರುವ ಪಾಕಿಸ್ತಾನ ಈಗಾಗ್ಲೇ ಫೈನಲ್ ಪ್ರವೇಶಿಸಿದೆ. ಅಂತಿಮವಾಗಿ 2022ರ ಟಿ20 ವಿಶ್ವಕಪ್ ಟ್ರೋಫಿಗಾಗಿ ನಡೆಯುವ ಹಣಾಹಣಿಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ.