ಮೂರು ವರ್ಷಗಳ ಹಿಂದೆ ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿದ ವೇಳೆ ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ತೀರ್ಮಾನಗಳನ್ನು ಕೈಗೊಂಡಿದ್ದವು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿತ್ತು.
ಅಲ್ಲದೆ ಸಭೆ ಸಮಾರಂಭಗಳಲ್ಲಿ, ವಿವಾಹ ಸೇರಿದಂತೆ ಮೊದಲಾದ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಯಲ್ಲಿ ಮಾತ್ರ ಅತಿಥಿಗಳು ಇರಬೇಕು ಎಂದು ತಿಳಿಸಲಾಗಿತ್ತು. ಇಷ್ಟಾದರೂ ಕೂಡ ಕೆಲವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈಗ ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಸಾರ್ವಜನಿಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂಪಡೆಯಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಈ ವಿಷಯ ತಿಳಿಸಿದ್ದಾರೆ.