ತಾನು ಅಕ್ಷರಸ್ಥಳಲ್ಲ. ನನಗೆ ಕಾನೂನಿನ ಅರಿವಿಲ್ಲ. ಹೀಗಾಗಿ ಡಿವೋರ್ಸ್ ಕೇಸ್ ರದ್ದುಗೊಳಿಸಬೇಕೆಂದು ಕೋರಿದ್ದ ಮಹಿಳೆಯ ಮನವಿಯನ್ನು ರದ್ದು ಮಾಡಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಶರ್ಮಿಳಾ ಯು ದೇಶಮುಖ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ತನ್ನ ಪತಿಯ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿರುವ ಮಹಿಳೆಯು ವಿಚ್ಛೇದನದ ಕಾನೂನು ಕಾರ್ಯವಿಧಾನ ತೀರ್ಪನ್ನು ತನಗೆ ತಿಳಿದಿಲ್ಲದ ಕಾರಣದಿಂದ ರದ್ದುಗೊಳಿಸಬೇಕೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿಚ್ಛೇದನದ ತೀರ್ಪನ್ನು ತಳ್ಳಿಹಾಕಲು ಕೋರಿದ್ದ ತನ್ನ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಮಹಿಳೆ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ಮೆಟ್ಟಿಲೇರಿದ್ದರು.
1986ರಲ್ಲಿ ಅಹ್ಮದ್ನಗರದಲ್ಲಿ ವಿವಾಹವಾದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮುಂಬೈಗೆ ತೆರಳಿದ ಬಳಿಕ ಇಬ್ಬರ ನಡುವೆ ಜಗಳ ನಡೆದಿದ್ದು, ಮಾನಸಿಕ ಕ್ರೌರ್ಯದ ಹಿನ್ನೆಲೆಯಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಮತ್ತು ಅವಳು ತನ್ನನ್ನು ತೊರೆದು ಮನೆಯಿಂದ ಹೊರಹೋಗುವ ಮೊದಲು ತನ್ನನ್ನು ಅವಮಾನಿಸುತ್ತಿದ್ದಳು ಎಂದು ಪತಿ ಆರೋಪಿಸಿದ್ದರು.
ತನ್ನ ಹೆಂಡತಿ ತನ್ನಿಂದ ಹಣವನ್ನು ಕದಿಯುತ್ತಿದ್ದಳು ಮತ್ತು ತನ್ನ ಮಕ್ಕಳನ್ನು ಎಂದಿಗೂ ನೋಡಿಕೊಳ್ಳಲಿಲ್ಲ ಎಂದು ವ್ಯಕ್ತಿ ಕೌಟುಂಬಿಕ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ನಂತರ ಕೌಟುಂಬಿಕ ನ್ಯಾಯಾಲಯ ಮಹಿಳೆಗೆ ಸಮನ್ಸ್ ಜಾರಿ ಮಾಡಿದ್ದು, ಅದನ್ನು ಆಕೆ ನಿರಾಕರಿಸಿದ್ದಳು. ಬಳಿಕ ವಿಚ್ಛೇದನದ ಪ್ರಕರಣವನ್ನು ಗಮನಿಸಿದ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿತು.
ನಂತರ ಪತ್ನಿ ನಾನು ಅನಕ್ಷರಸ್ಥೆ ಮತ್ತು ಕಾನೂನು ಕಾರ್ಯವಿಧಾನದ ಬಗ್ಗೆ ತಿಳಿದಿರಲಿಲ್ಲ ಎಂಬ ಕಾರಣಕ್ಕಾಗಿ ವಿಚ್ಛೇದನದ ತೀರ್ಪನ್ನು ರದ್ದುಗೊಳಿಸುವಂತೆ ಸಿವಿಲ್ ಅರ್ಜಿಯನ್ನು ಸಲ್ಲಿಸಿದರು. ಈ ಪ್ರಕರಣದಲ್ಲಿ ವಿಚ್ಛೇದನದ ಆದೇಶವನ್ನು ಬದಿಗಿಟ್ಟು ತನಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಆಕೆ ಹೇಳಿಕೊಂಡಿದ್ದಳು.
ಮಹಿಳೆಯು ತನ್ನ ಪತಿ ವಿರುದ್ಧ ಮೂರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿರುವುದರಿಂದ ಆಕೆ ಅನಕ್ಷರಸ್ಥಳಾಗಿದ್ದಾಳೆಂದು ನಂಬಲಾಗಲ್ಲ. ಆಕೆಗೆ ಕಾನೂನಿನ ಅರಿವಿರುತ್ತದೆ ಎಂದು ಕೌಟುಂಬಿಕ ನ್ಯಾಯಾಲಯವು ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು.