ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು.
ಯಾವುದೇ ಸೂಚನೆ ನೀಡದೆ ಟ್ವಿಟ್ಟರ್, ಉದ್ಯೋಗಿಗಳನ್ನು ವಜಾ ಮಾಡಿದ್ದಕ್ಕೆ ಸಾಕಷ್ಟು ಆಕ್ರೋಶ ಸಹ ವ್ಯಕ್ತವಾಗಿತ್ತು. ಇದೀಗ ಟ್ವಿಟರ್ ನಂತರದ ಸರದಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಉದ್ಯೋಗಿಗಳದ್ದು. ಈ ಮೂರೂ ಸಂಸ್ಥೆಯ ಉದ್ಯೋಗಿಗಳ ಕೆಲಸವೀಗ ಅಪಾಯದಲ್ಲಿದೆ.
ಈ ಪ್ಲಾಟ್ಫಾರ್ಮ್ಗಳ ಮೂಲ ಕಂಪನಿಯಾದ ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಕೂಡ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರೆ. ಈ ಬಗ್ಗೆ ಖುದ್ದು ಜುಕರ್ಬರ್ಗ್ ಘೋಷಣೆಯನ್ನೂ ಮಾಡಿದ್ದಾರೆ. ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ.13ರಷ್ಟು ಮಂದಿಗೆ ಸಂಸ್ಥೆಯಿಂದ ವಿದಾಯ ಹೇಳಲಿದ್ದೇನೆ, ಇದು ಎಲ್ಲಾ ಅಪ್ಲಿಕೇಶನ್ಗಳು ಮತ್ತು ರಿಯಾಲಿಟಿ ಲ್ಯಾಬ್ಗಳ ಉದ್ಯೋಗಿಗಳನ್ನು ಒಳಗೊಂಡಿರುತ್ತದೆ ಎಂದು ಪ್ರಕಟಿಸಿದ್ದಾರೆ. ಕಳೆದ ವಾರ ಟ್ವಿಟರ್ನ ಶೇ.10 ರಷ್ಟು ಸಿಬ್ಬಂದಿಯನ್ನು ಎಲೊನ್ ಮಸ್ಕ್ ವಜಾಗೊಳಿಸಿದ್ದರು. ಈಗ ಜುಕರ್ಬರ್ಗ್ ಶೇ.13ರಷ್ಟು ನೌಕರರನ್ನು ಕಿತ್ತೊಗೆಯುವುದಾಗಿ ಘೋಷಿಸಿದ್ದಾರೆ.
ಈ ಕಠಿಣ ನಿರ್ಧಾರ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಮೆಟಾ ಇತಿಹಾಸದಲ್ಲಿ ಇದು ಅತ್ಯಂತ ಕಷ್ಟಕರವಾದ ಬದಲಾವಣೆ. 11,000 ಕ್ಕೂ ಹೆಚ್ಚು ಪ್ರತಿಭಾವಂತ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ. ಕಂಪನಿಯ ಕೆಲಸವನ್ನು ಸುಧಾರಿಸಲು ನಾವು ಇನ್ನೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಅಂತಾ ತಮ್ಮ ಬ್ಲಾಗ್ ಪೋಸ್ಟ್ನಲ್ಲಿ ಅವರು ಬರೆದುಕೊಂಡಿದ್ದಾರೆ. ವಜಾಗೊಳಿಸುವಿಕೆಯಿಂದ ಪ್ರಭಾವಿತರಾಗಲಿರುವ ಎಲ್ಲಾ ಉದ್ಯೋಗಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.