ಮದ್ಯಪಾನ ಮಾಡಿ ವಾಹನ ಚಲಾಯಿಸ ಬೇಡಿ, ಟ್ರಾಫಿಕ್ ಪೊಲೀಸ್ ಈ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಿದ್ರೂ, ವಾಹನ ಸವಾರರು ಕುಡಿದು ವಾಹನ ಓಡಿಸೋದ್ರಲ್ಲೇ ಕಿಕ್ ಎಂದು ಗಾಡಿ ಓಡಿಸ್ತಿರ್ತಾರೆ. ಆ ರೀತಿ ಓಡಿಸುವಾಗಲೇ ಆಗಬಾರದ ಅನಾಹುತಗಳು ನಡೆದು ಬಿಡೋದು. ಅಂತಹದ್ದೇ ಒಂದು ಭೀಕರ ಘಟನೆಯೊಂದು ಈಗ ವೈರಲ್ ಆಗಿದೆ.
ಇದು ಗುರುಗ್ರಾಮ್ನ ವಿದ್ಯಾವಿಹಾರ್ ಸ್ಟೇಜ್4ರಲ್ಲಿ ನಡೆದ ಘಟನೆ. ಕುಡಿದ ಅಮಲಿನಲ್ಲಿದ್ದ ಕಾರಿನ ಚಾಲಕ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಆದರೆ ಬ್ಯಾಲೆನ್ಸ್ ತಪ್ಪಿ ಅಲ್ಲೇ ನಿಂತವರಿಗೆ ಗುದ್ದಿದ್ದಾನೆ. ಕಾರು ಗುದ್ದಿದ್ದಷ್ಟೇ ಅಲ್ಲ, ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಕಾರು ಗುದ್ದಿದ ರಭಸಕ್ಕೆ 50 ವರ್ಷದ ವ್ಯಕ್ತಿಯ ಸಾವು ಸ್ಥಳದಲ್ಲೇ ಸಂಭವಿಸಿದೆ. ಇನ್ನೂ ಇಬ್ಬರಿಗೆ ಗಂಭೀರ ರೂಪದ ಗಾಯಗಳಾಗಿದ್ದು, ಅವರನ್ನ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಕಾರಣವಾದವರನ್ನ ಪೊಲೀಸರು ಬಂಧಿಸಿದ್ದು, ಅವರಿಂದ 2 ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ ಸೌರಭ ಶರ್ಮಾ ಅಲಿಯಾಸ್ ಸೈಬಿ, ರಾಹುಲ್, ರವಿ ಸಿಂಗ್ ಅಲಿಯಾಸ್ ರವೀಂದರ್ ವಿಕಾಸ್ ಅಲಿಯಾಸ್ ವಿಕ್ಕಿ, ಮೋಹಿತ್, ಮುಕುಲ್, ಸೋನಿ ಇವರನ್ನ ಬೆಳಿಗ್ಗೆ ಬಂಧಿಸಿದರೆ ಅಶೋಕ್ ಎಂಬಾತನನ್ನ ತಡರಾತ್ರಿ ಬಂಧಿಸಲಾಗಿದೆ.
ಅಶೋಕ್ ಹೊರತುಪಡಿಸಿ ಉಳಿದೆಲ್ಲರನ್ನೂ ನಗರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸದ್ಯಕ್ಕೆ ನ್ಯಾಯಾಲಯದಿಂದ ಬಂಧನಕ್ಕೊಳಪಟ್ಟಿದ್ದಾರೆ. ಪೊಲೀಸರು ಪದೇ ಪದೇ ಎಚ್ಚರಿಸಿದರೂ ಕುಡಿದ ಅಮಲಿನಲ್ಲಿ ಗಾಡಿ ಓಡಿಸುವ ಹುಚ್ಚಾಟಕ್ಕೆ ವಾಹನ ಸವಾರರು ಇಳಿಯುತ್ತಲೇ ಇರುತ್ತಾರೆ. ಯಾರದೋ ಹುಚ್ಚಾಟಕ್ಕೆ ಇನ್ಯಾರೋ ಬಲಿಯಾಗುತ್ತಿರುವುದೇ ವಿಪರ್ಯಾಸ.