ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟಲಿಜನ್ಸ್ ಬ್ಯೂರೋ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ನಿವೇಶನದ ಗಲಾಟೆ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಮೈಸೂರಿನಲ್ಲಿ ವಾಸವಾಗಿರುವ ನಿವೃತ್ತ ಇಂಟಲಿಜೆನ್ಸ್ ಬ್ಯುರೋ ಅಧಿಕಾರಿ ಆರ್.ಎನ್. ಕುಲಕರ್ಣಿ ಎಂಬವರು ವಾಯು ವಿಹಾರ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಮೊದಲಿಗೆ ಇದೊಂದು ಅಪಘಾತ ಪ್ರಕರಣ ಎಂದು ಭಾವಿಸಲಾಗಿತ್ತು.
ಆದರೆ ಸಿಸಿ ಟಿವಿ ದೃಶ್ಯಾವಳಿ ವೀಕ್ಷಿಸಿದ ವೇಳೆ ಶಾಕಿಂಗ್ ಮಾಹಿತಿ ಬಹಿರಂಗವಾಗಿತ್ತು. ಉದ್ದೇಶಪೂರ್ವಕವಾಗಿಯೇ ಕುಲಕರ್ಣಿ ಅವರಿಗೆ ಕಾರು ಡಿಕ್ಕಿ ಹೊಡೆದಿರುವುದು ಕಂಡುಬಂದಿತ್ತಲ್ಲದೆ ಕಾರಿನ ನೋಂದಣಿ ಫಲಕವನ್ನು ಸಹ ತೆಗೆದು ಹಾಕಲಾಗಿತ್ತು.
ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮನು ಹಾಗೂ ಆತನ ಸ್ನೇಹಿತ ವರುಣ್ ಎಂಬವರನ್ನು ಬಂಧಿಸಿದ್ದಾರೆ. ಮನು ತಂದೆ ಮಾದಪ್ಪ, ಕುಲಕರ್ಣಿ ಮನೆ ಪಕ್ಕದ ನಿವೇಶನದಲ್ಲಿ ಮನೆ ಕಟ್ಟಿಸುತ್ತಿದ್ದು, ಆದರೆ ಜಾಗ ಬಿಡುವ ವಿಚಾರದಲ್ಲಿ ಜಗಳವಾದ ಕಾರಣ ಕುಲಕರ್ಣಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಎನ್ನಲಾಗಿದೆ.
ಇದರಿಂದ ಕುಲಕರ್ಣಿಯವರ ವಿರುದ್ಧ ಆಕ್ರೋಶಗೊಂಡಿದ್ದ ಮಾದಪ್ಪನ ಪುತ್ರ ಮನು ಕಾರು ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾನೆ. ಮನು ಸ್ನೇಹಿತ ವರುಣ್ ಬೈಕಿನಲ್ಲಿ ಕುಲಕರ್ಣಿ ಅವರನ್ನು ಹಿಂಬಾಲಿಸಿ ಅವರ ಚಲನವಲನಗಳ ಮಾಹಿತಿಯನ್ನು ನೀಡಿದ್ದ ಎಂದು ಆರೋಪಿಸಲಾಗಿದೆ.