ಕೊರೊನಾ ಎಂಬ ಮಹಾಮಾರಿ ದೇಶದ ಜನರನ್ನು ಇನ್ನಿಲ್ಲದಂತೆ ಬಾಧಿಸಿದೆ. 2020 ರ ಮಾರ್ಚ್ ನಲ್ಲಿ ಮೊದಲ ಕೋವಿಡ್ ಸಾವು ಸಂಭವಿಸಿದ್ದು, ಈವರೆಗೆ ಲಕ್ಷಾಂತರ ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಸೋಂಕು ಅಬ್ಬರಿಸುತ್ತಿದ್ದ ವೇಳೆ ಕೆಲವೊಂದು ಕುಟುಂಬಗಳು ಸಂಪೂರ್ಣವಾಗಿ ನಿರ್ನಾಮವಾಗಿವೆ.
ಇದೀಗ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಕೆಲವೊಂದು ದಿನ 1000 ಕ್ಕಿಂತಲೂ ಕಡಿಮೆ ಕೇಸ್ ದಾಖಲಾಗುತ್ತಿವೆ. ಅಲ್ಲದೆ ಮಂಗಳವಾರದಂದು ಯಾವುದೇ ಕೋವಿಡ್ ಸಾವಿನ ಪ್ರಕರಣಗಳು ನಡೆದಿಲ್ಲವಾದ ಕಾರಣ ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶೂನ್ಯ ಕೋವಿಡ್ ಸಾವು ದಾಖಲಾದಂತಾಗಿದೆ.
ಕೋವಿಡ್ ಆರ್ಭಟ ಜೋರಾಗಿದ್ದ ಸಂದರ್ಭದಲ್ಲಿ ಪ್ರತಿದಿನವೂ ಸಾವಿರಾರು ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಸಾವನ್ನಪ್ಪಿದವರ ಶವ ಸಂಸ್ಕಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೇ ಸಾವಿರಾರು ಮಂದಿ ಸಾವನ್ನಪ್ಪಿರುವ ಘಟನೆಗಳೂ ನಡೆದಿದ್ದವು.