ಇಂದೋರ್ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ನಾಲ್ವರು ಯುವತಿಯರು ಕಂಠಪೂರ್ತಿ ಕುಡಿದು ಮತ್ತೊಬ್ಬಳನ್ನು ಥಳಿಸುವ ವಿಡಿಯೋ ಇದಾಗಿದೆ.
ಈ ವಿಡಿಯೋದಲ್ಲಿ, ನಾಲ್ವರು ಯುವತಿಯರು ಮತ್ತೊಬ್ಬಳು ಯುವತಿಯನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಮೂವರು ಯುವತಿಯರು ಮತ್ತೊಬ್ಬಳು ಯುವತಿಯ ಮೇಲೆ ಕಿಕ್ ಹಾಗೂ ಪಂಚ್‌ಗಳನ್ನು ಮಾಡಿದ್ದು ಅಮಾನುಷವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಯುವತಿಯ ಮೊಬೈಲ್ ಅನ್ನು ಒಡೆದು ಹಾಕಿದ್ದಾರೆ.
ಯುವತಿಯರು ಪಬ್‌ನ ಹೊರಗೆ ಅಮಲೇರಿದ ಸ್ಥಿತಿಯಲ್ಲಿ ಕೂದಲು ಎಳೆಯುವುದು, ಒದೆಯುವುದು ಮತ್ತು ಬೆಲ್ಟ್ ಹಾಗೂ ಕೋಲಿನಿಂದ ಹೊಡೆಯುವುದನ್ನು ನೋಡಬಹುದು. ರಸ್ತೆ ಮಧ್ಯೆ ಈ ಘಟನೆ ನಡೆದಿದ್ದು, ಜನರು ಜಗಳ ನಿಲ್ಲಿಸುವ ಬದಲು ವಿಡಿಯೋ ಮಾಡುತ್ತಾ ಹಾಗೂ ನೋಡುತ್ತಾ ನಿಂತಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಎಲ್‌ಐಸಿ ತಿರಾಹಾದಲ್ಲಿ ನಡೆದಿದೆ ಎನ್ನಲಾಗಿದ್ದು ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವತಿಯರು ಮದ್ಯ ಮಾತ್ರವಲ್ಲದೇ ಡ್ರಗ್ಸ್ ಕೂಡ ಸೇವಿಸಿದ್ದರು ಎನ್ನಲಾಗಿದೆ.