ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈ ವಾರ ಶುಭ ಸುದ್ದಿ ಸಿಗಲಿದೆ. ಮೂರ್ನಾಲ್ಕು ದಿನಗಳಲ್ಲಿ 7ನೇ ವೇತನ ಆಯೋಗ ರಚನೆ ಸಂಬಂಧ ಆದೇಶ ಹೊರಬೀಳಲಿದ್ದು, ಫೆಬ್ರವರಿ 2023ರ ಬಜೆಟ್ ನಲ್ಲಿ ವೇತನ ಪರಿಷ್ಕರಣೆ ತೀರ್ಮಾನವನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಈ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಪ್ರವಾಸದಿಂದ ಮರಳಿದ ನಂತರ 7ನೇ ವೇತನ ಆಯೋಗ ರಚನೆ ಆದೇಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಕಳೆದ ಭಾನುವಾರ ಸಿಎಂ ವೇತನ ಆಯೋಗ ರಚನೆಗೆ ಸಮ್ಮತಿಸಿ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೊಬ್ಬರ ಅಧ್ಯಕ್ಷತೆಯಲ್ಲಿ ವೇತನ ಆಯೋಗ ರಚನೆಗೆ ತೀರ್ಮಾನಿಸಲಾಗಿದೆ.
ಮೂಲ ವೇತನದೊಂದಿಗೆ ತುಟ್ಟಿಭತ್ಯೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕೆಂಬುದು ನೌಕರರ ಸಂಘದ ಬೇಡಿಕೆಯಾಗಿದ್ದು, ಮೂಲವೇತನದ ಶೇಕಡ 40ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. 2022ರ ಜುಲೈ 1 ರಿಂದ ವೇತನ ಪರಿಷ್ಕರಣೆಯಾಗಬೇಕಿದ್ದು, 2023ರ ಏಪ್ರಿಲ್ 1ರಿಂದ ಆರ್ಥಿಕ ಅನುಕೂಲ ಸಿಗಬೇಕಿದೆ ಎಂಬುದು ನೌಕರರ ವಲಯದ ಬೇಡಿಕೆಯಾಗಿದೆ.