ಹಿಂದೂ ಪದದ ಕುರಿತಾಗಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಹಿಂದೂಗಳನ್ನು ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿಯಾಗಿದ್ದಾರೆ. ಅವರು ನಾಸ್ತಿಕವಾದಿಯಾಗಿದ್ದು, ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಸತೀಶ್ ಅವರಿಗೆ ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ಕ್ಷಮೆ ಕೇಳಬೇಕು. ಹಿಂದೂ ಶಬ್ದ ಅತ್ಯಂತ ಪ್ರಾಚೀನ ಮತ್ತು ಪುರಾತನವಾದದ್ದು. ಕ್ರಿಸ್ತಪೂರ್ವದಿಂದಲೂ ಹಿಂದೂ ಶಬ್ದ ಬಳಕೆಯಲ್ಲಿದೆ. ಈ ಪದಕ್ಕೆ ಅಪಮಾನ ಮಾಡುವುದು ಸರಿಯಲ್ಲ, ಕಾಂಗ್ರೆಸ್ ನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.
ಕುವೆಂಪು ಅವರ ನಾಡಗೀತೆಯಲ್ಲಿಯೇ ಹಿಂದೂ ಪದ ಇದೆ. ಹಿಂದೂ ಧರ್ಮ ಜೀವನ ಪದ್ಧತಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಿಂದೂ ಶಬ್ದ ಜಾತಿ ಸೂಚಕ, ಮತ ಸೂಚಕ ಅಲ್ಲ ಎಂದು ಅವರು ಹೇಳಿದ್ದಾರೆ.