ಗುಂಟೂರು (ಆಂಧ್ರಪ್ರದೇಶ): ತೆಲುಗು ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಗುಂಟೂರಿನ ಹಳ್ಳಿಯೊಂದಕ್ಕೆ ಸಿನಿಮಾ ಸ್ಟೈಲ್ನಲ್ಲಿ ಭೇಟಿ ನೀಡಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಪವನ್ ಕಲ್ಯಾಣ್ ಅವರು ತಮ್ಮ ಕಾರಿನ ಮೇಲುಗಡೆ ಕುಳಿತು ಸಿನಿಮಾದಲ್ಲಿ ಹೀರೋ ಎಂಟ್ರಿ ನೀಡುವ ರೀತಿಯಲ್ಲಿ ಬಂದಿದ್ದಾರೆ. ಅವರ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ವಾಹನದ ಬದಿಗಳಲ್ಲಿ ತೂಗಾಡುತ್ತಿದ್ದಾರೆ. ಇವರ ಕಾರಿನ ಹಿಂದುಗಡೆ ಇದೇ ರೀತಿಯ ಹಲವಾರು ಕಾರುಗಳು ಅವರನ್ನು ಹಿಂಬಾಲಿಸುತ್ತಿವೆ ಮತ್ತು ದ್ವಿಚಕ್ರ ವಾಹನಗಳು ಸುತ್ತಲೂ ಭದ್ರತೆಯನ್ನು ಒದಗಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಗುಂಟೂರಿನ ಇಪ್ಪಟಂ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆಯ ಅಂಗವಾಗಿ ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡ ಜನರನ್ನು ಭೇಟಿಯಾಗಲು ಜನಸೇನಾ ನಾಯಕರು ಬಂದಿದ್ದು, ಈ ವೇಳೆ ಈ ರೀತಿಯ ಎಂಟ್ರಿ ಕೊಟ್ಟಿದ್ದಾರೆ.
ಟ್ರಾಫಿಕ್ ಜಾಂ ಹಾಗೂ ಕೆಲವು ಸುರಕ್ಷತೆಯ ದೃಷ್ಟಿಯಿಂದ ಅವರ ಬೆಂಗಾವಲು ವಾಹನವನ್ನು ಮೊದಲು ಮಂಗಳಗಿರಿಯಲ್ಲಿ ನಿಲ್ಲಿಸಲಾಯಿತು ಮತ್ತು ಅವರ ಕಾರನ್ನು ಗ್ರಾಮಕ್ಕೆ ಅನುಮತಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ತೆರಳಿದರು. ಜನರ ಜತೆ ಮಾತುಕತೆ ನಡೆಸಿದರು.