ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ. ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಮಾತ್ರ ಇದು ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಯು.ಯು. ಲಲಿತ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಡಲಾಗಿದ್ದು, ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿ ಸರಿಯಾಗಿದೆ ಎಂದು ಮೀಸಲಾತಿ ಪರ ತೀರ್ಪು ನೀಡಿರುವ ನ್ಯಾಯಾಧೀಶರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಶಿಕ್ಷಣ ಉದ್ಯೋಗಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ಮೀಸಲಾತಿ ನೀಡಿದ್ದು ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮೂವರು ನ್ಯಾಯಮೂರ್ತಿಗಳ ಪರವಾದ ತೀರ್ಪಿನಿಂದಾಗಿ ಉಚ್ಛ ನ್ಯಾಯಾಲಯ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಂತಾಗಿದೆ.