ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ ಪ್ರಕ್ರಿಯೆಗೆ ಐಒಎಸ್ ಮೂಲಕ ಚಾಲನೆ ನೀಡಿದ್ದಾರೆ. ಇದು ಭಾರತದಲ್ಲಿ ಇನ್ನೊಂದು ತಿಂಗಳಿನಲ್ಲಿ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಟ್ವಿಟರ್ ಹೊಸ ಮಾಲೀಕ ಎಲಾನ್ ಮಸ್ಕ್ ಕೆಲವೇ ದಿನಗಳ ಹಿಂದೆ ಘೋಷಿಸಿದ್ದ 8 ಡಾಲರ್ (ಸುಮಾರು 665 ರೂಪಾಯಿ) ಪರಿಶೀಲನಾ ಸೇವೆಯನ್ನು ಟ್ವಿಟರ್ ಶನಿವಾರ ಹೊರತಂದಿದ್ದು, ಆರಂಭಿಕ ಹಂತವಾಗಿ ಈ ನೂತನ ನವೀಕರಣ ಪ್ರಕ್ರಿಯೆಯು ಪ್ರಸ್ತುತ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಐಫೋನ್ಗಳಲ್ಲಿ ಮಾತ್ರ ಲಭ್ಯವಿದೆ. ಇದನ್ನು ಭಾರತದಲ್ಲಿ ಯಾವಾಗ ಜಾರಿ ಮಾಡುವಿರಾ ಎಂದು ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಮಸ್ಕ್ ಬರುವ ತಿಂಗಳು ಎಂದು ಉತ್ತರಿಸಿದ್ದಾರೆ.
ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಈ ಸೇವೆ ಲಭ್ಯವಿರಲಿದೆ. IOS ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್, ‘ಇಂದಿನಿಂದ ನಾವು ಟ್ವಿಟರ್ ಬ್ಲೂ ಟಿಕ್ಗೆ ಹೊಸ ಫೀಚರ್ ಗಳನ್ನು ಸೇರಿಸುತ್ತಿದ್ದೇವೆ. ಶೀಘ್ರವೇ ಬಳಕೆದಾರರಿಗೆ ಹೊಸ ಮತ್ತು ಹೆಚ್ಚಿನ ಫೀಚರ್ಗಳನ್ನು ಪಡೆಯಲಿದ್ದಾರೆ. ಸದ್ಯಕ್ಕೆ ನೀವು ಸೈನ್ಅಪ್ ಮಾಡಿದರೆ ತಿಂಗಳಿಗೆ 7.99 ಡಾಲರ್ ನೀಡಿ ಟ್ವಿಟರ್ ಬ್ಲೂ ಟಿಕ್ ಪಡೆಯಬಹುದು’ ಎಂದು ಹೇಳಿದೆ.