ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು, ಸರ್ಕಾರದ ನಿಲುವು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಸೋಮವಾರ ತೀರ್ಪು ಪ್ರಕಟಿಸಲಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್. ರವೀಂದ್ರ ಭಟ್. ಬೇಲಾ ಎಂ. ತ್ರಿವೇದಿ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ಸೆ. 27ರಂದು ತೀರ್ಪು ಕಾಯ್ದಿರಿಸಿತ್ತು.
ಜನಹಿತ ಅಭಿಯಾನ ಸ್ವಯಂಸೇವಾ ಸಂಸ್ಥೆ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ 7 ದಿನಗಳ ಕಾಲ ನಡೆದಿತ್ತು. ನಾಳೆ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾ.ರವೀಂದ್ರ ಭಟ್ ಅವರು ಪ್ರತ್ಯೇಕವಾಗಿ ತೀರ್ಪು ಪ್ರಕಟಿಸಲಿದ್ದಾರೆ.