ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಈ ಸಮಯದಲ್ಲಿ ಇಲ್ಲಿಯ ಮಸಾಲೆ ದೋಸೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ ಜೆವ್ ಸೀಗಲ್ ಇಲ್ಲಿಯ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್ಗೆ ಹೋಗಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದಿರುವುದು.
ವಿಶ್ವದ ಅತಿದೊಡ್ಡ ಕಾಫಿ ಸರಪಳಿ ಸಂಸ್ಥೆಯಾದ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರು ವಿದ್ಯಾರ್ಥಿ ಭವನ ಉಪಾಹಾರ ಗೃಹಕ್ಕೆ ಹೋಗಿ ಒಂದು ಕಪ್ ಅತ್ಯುತ್ತಮ ಫಿಲ್ಟರ್ ಕಾಫಿಯೊಂದಿಗೆ ಮಸಾಲಾ ದೋಸೆಯನ್ನು ಸವಿದಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ.
ಅವರ ಭೇಟಿಯ ಚಿತ್ರಗಳನ್ನು ವಿದ್ಯಾರ್ಥಿ ಭವನವು ಹಂಚಿಕೊಂಡಿದೆ. “ನನ್ನ ಸ್ನೇಹಿತರೇ, ನಿಮ್ಮ ಪ್ರಸಿದ್ಧ ಆಹಾರ, ಕಾಫಿ ಮತ್ತು ದೋಸೆಯನ್ನು ಸವಿದಿದ್ದು, ನಿಮ್ಮ ಆತಿಥ್ಯ, ಗೌರವ ನನಗೆ ತೀವ್ರ ಸಂತೋಷವನ್ನುಂಟುಮಾಡಿದೆ. ಸಿಯಾಟೆಲ್ ಗೆ ಇಲ್ಲಿನ ಅದ್ಭುತ ಅನುಭವದೊಂದಿಗೆ ಮರಳುತ್ತೇನೆ, ಧನ್ಯವಾದಗಳು” ಎಂದು ಬರೆದು ಮೂರು ಸ್ಟಾರ್ ಗುರುತುಗಳನ್ನು ನೀಡಿದ್ದಾರೆ.
ಅಂದಹಾಗೆ, ದಕ್ಷಿಣ ಭಾರತದ ಖ್ಯಾತ ಸಾಂಪ್ರದಾಯಿಕ ಸಸ್ಯಾಹಾರಿ ಉಪಾಹಾರ ಗೃಹ ವಿದ್ಯಾರ್ಥಿ ಭವನವಾಗಿದ್ದು, 1943 ರಲ್ಲಿ ಸಣ್ಣ ವಿದ್ಯಾರ್ಥಿಗಳ ಉಪಾಹಾರ ಗೃಹವಾಗಿ ಪ್ರಾರಂಭವಾಯಿತು.