ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇವುಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಜೊತೆಗೆ ಕಠಿಣ ಗೋಹತ್ಯೆ ವಿರೋಧಿ ಕಾನೂನಿನ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಣೆ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಇನ್ಮುಂದೆ ಆನ್ಲೈನ್ ಪಾಸ್ ಪರ್ಮಿಟ್ ಇದ್ದರೆ ಮಾತ್ರ ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಜಾನುವಾರುಗಳ ಸಾಗಣೆಗೆ ಅನುಮತಿ ನೀಡಲಾಗುತ್ತದೆ. ಸರ್ಕಾರ ಹೊಸ ಕರಡು ನಿಯಮಗಳಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಸರ್ಕಾರ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ನಿಯಮಗಳು – 2022ರ ಕರಡನ್ನು ಸಾರ್ವಜನಿಕ ಪರಿಶೀಲನೆಗಾಗಿ ಅಧಿಸೂಚಿಸಿದೆ.
ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಸಾರಿಗೆ ಮೂಲಕ ಅಥವಾ ಇನ್ಯಾವುದೇ ವಿಧಾನದಲ್ಲಿ ಜಾನುವಾರುಗಳನ್ನು ಸಾಗಿಸಲು ಉದ್ದೇಶಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಆನ್ಲೈನ್ ಮೂಲಕ ಜಾನುವಾರು ಪಾಸ್ ಪರವಾನಗಿ ಪಡೆಯಬೇಕು. ಈ ಹೊಸ ಜಾನುವಾರು ಪಾಸ್ ಪರ್ಮಿಟ್ ವ್ಯವಸ್ಥೆಯು ಸಾರಿಗೆ ಪ್ರಮಾಣಪತ್ರ, ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಸಾಧನಗಳನ್ನು ಒಳಗೊಂಡಿರುತ್ತದೆ. 15 ಕಿಮೀ ಅಂತರದ ಸ್ಥಳೀಯ ಪ್ರದೇಶಕ್ಕೆ ಪ್ರಾಣಿಗಳನ್ನು ಸಾಗಿಸುತ್ತಿದ್ದರೆ ಜಾನುವಾರು ಪಾಸ್ ಪರವಾನಗಿ ಅಗತ್ಯವಿಲ್ಲ ಎಂದು ಕರಡು ನಿಯಮಗಳು ಹೇಳುತ್ತವೆ.
ಅಷ್ಟೇ ಅಲ್ಲ ನಿಯಮಗಳ ಪ್ರಕಾರ ಆನ್ಲೈನ್ ಜಾನುವಾರು ಪಾಸ್ ಪರ್ಮಿಟ್ಗೆ ಶುಲ್ಕವನ್ನೂ ಕಟ್ಟಬೇಕು. ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಜಾನುವಾರುಗಳನ್ನು ಸಾಗಿಸಲು 25 ರೂಪಾಯಿ, ಲಘು ವಾಣಿಜ್ಯ ವಾಹನಗಳಿಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಜಿಎಸ್ಟಿ ಅನ್ವಯವಾಗುವ ವಾಣಿಜ್ಯ ಉದ್ದೇಶಕ್ಕಾದರೆ ವಾಹನ ಮಾಲೀಕರೇ ಶುಲ್ಕ ಕಟ್ಟಬೇಕು. 2021 ರಿಂದ್ಲೇ ಜಾರಿಯಲ್ಲಿರುವ ನಿಯಮದ ಪ್ರಕಾರ, ಕರ್ನಾಟಕ ವಧೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯಿದೆಯಂತೆ ಯಾವುದೇ ಜಾನುವಾರುಗಳನ್ನು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ರಾಜ್ಯದೊಳಗೆ ಅಥವಾ ಹೊರಗಿನ ಯಾವುದೇ ಸ್ಥಳಕ್ಕೆ ವಧೆಗಾಗಿ ಸಾಗಿಸುವಂತಿಲ್ಲ.
ರಾಜ್ಯದಲ್ಲಿ ಜಾನುವಾರುಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷ ಮೇಲ್ಪಟ್ಟ ಮಾರಣಾಂತಿಕ ಅನಾರೋಗ್ಯಕ್ಕೀಡಾಗಿರುವ ದನ ಮತ್ತು ಎಮ್ಮೆಗಳ ಹತ್ಯೆಗೆ ಮಾತ್ರ ಅನುಮತಿಸಲಾಗಿದೆ.