ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮತ್ತೆ ನೊಟೀಸ್ ಜಾರಿ ಮಾಡಿದ್ದಾರೆ.
ಇಡಿ ನೋಟಿಸ್ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನನಗೆ ಹಾಗೂ ನನ್ನ ಸಹೋದರ ಡಿ.ಕೆ. ಸುರೇಶ್ ಇಬ್ಬರಿಗೂ ಇಡಿ ಅಧಿಕಾರಿಗಳು ಮತ್ತೆ ನೊಟೀಸ್ ನೀಡಿದ್ದಾರೆ. ಒಮ್ಮೆ ಹೋಗಿ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಆದರೆ ಈಗ ಮತ್ತೆ ನೋಟೀಸ್ ಜಾರಿ ಮಾಡಿದ್ದಾರೆ. ತನಿಖಾಧಿಕಾರಿ ಬದಲಾಗಿದ್ದಾರಂತೆ. ಹಾಗಾಗಿ ಮತ್ತೆ ವಿಚಾರಣೆಗೆ ಬರಲು ಹೇಳಿದ್ದಾರೆ ಎಂದರು.
ಇಡಿ ಅಧಿಕಾರಿಗಳಿಗೆ ಇನ್ನೂ ಹಲವು ದಾಖಲೆಗಳನ್ನು ಕಳುಹಿಸುತ್ತೇವೆ. ಒಂದೇ ವಿಚಾರಕ್ಕೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಾಗಾಗಿ ನಾನು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇನೆ. ಯಾಕೆ ಪದೇ ಪದೇ ಕರೆದು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದರು.