ತೂಕ ಇಳಿಸಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿ, ಕಡಿಮೆ ಕ್ಯಾಲೋರಿ ಆಹಾರಗಳನ್ನು ತಿನ್ನಲು ಆರಂಭಿಸಿದಾಗ ದೇಹ ಸಹಜವಾಗಿ ತನ್ನ ಅವಶ್ಯಕತೆಗಳಿಗಾಗಿ ಕ್ಯಾಲೋರಿಗಳನ್ನ ಸಂಗ್ರಹಿಸಲು ಆರಂಭಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆಗಳಿಗೆ ಹಾನಿಯುಂಟಾಗಿ, ಜೀರ್ಣಕ್ರಿಯೆಯ ತೊಂದರೆಗಳು ಸೃಷ್ಟಿಯಾಗುತ್ತದೆ. ಇಂಥ ತೊಂದರೆಗಳು ಕಾಣಿಸಿಕೊಂಡಾಗ ಸೆಲ್ಪ್ ಡಯಟ್ ಬಿಟ್ಟು ಮೊದಲಿನಂತೆಯೇ ಆಹಾರವನ್ನ ತೆಗೆದುಕೊಳ್ಳಲು ಆರಂಭಿಸಿದರೆ, ದೇಹದ ತೂಕ ಮೊದಲಿನ ತೂಕಕ್ಕಿಂತಲೂ ಹೆಚ್ಚಾಗುವ ಸಂಭವವೇ ಹೆಚ್ಚು.
ಸೆಲ್ಫ್ ಡಯಟ್ ನಲ್ಲಿರುವವರು ಹಸಿವನ್ನ ಸಹಿಸಿಕೊಳ್ಳುವುದರಿಂದ ಸ್ನಾಯುಗಳ ಶಕ್ತಿ ಕುಂದಲು ಆರಂಭವಾಗುತ್ತದೆ. ಅಲ್ಲದೆ, ಆಹಾರ ಮತ್ತು ನೀರಿನ ಕೊರತೆಯಿಂದ ಅಜೀರ್ಣ ತೊಂದರೆ ಕಾಣಿಸಿಕೊಳ್ಳುತ್ತದೆ
ಕ್ರಮವಿಲ್ಲದ ಡಯಟ್ ಮಾಡಿ, ಹೊಟ್ಟೆಯ ಹಸಿವನ್ನ ಸುಮ್ಮನೆ ಸಹಿಸುವುದರಿಂದ ಮಹಿಳೆಯರಲ್ಲಿ ಮುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಖನಿಜಾಂಶ ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು ಉದುರುವಿಕೆ, ಮೂಳೆ ಮೆತ್ತಗಾಗುವಿಕೆಯಂಥ ಹಲವಾರು ದೈಹಿಕ ತೊಂದರೆಗಳು ಉಲ್ಬಣವಾಗಬಲ್ಲವು.
ಕಾರ್ಬೋಹೈಡ್ರೇಟ್ ಸೇವನೆಯು ನಮ್ಮ ದೇಹಕ್ಕೆ ಬಹಳ ಮುಖ್ಯ. ಆದರೆ ಸೆಲ್ಫ್ ಡಯಟಿಂಗ್ ನಲ್ಲಿರುವವರು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಗಳು ಹೆಚ್ಚಿರುವ ಆಹಾರವನ್ನ ತ್ಯಜಿಸಿರುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಕಾರ್ಬೋಹೈಡ್ರೇಟ್ ಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳದೆಯೇ ಡಯಟ್ ಮಾಡುವುದರಿಂದ ಮತ್ತು ಅತ್ಯಂತ ಕಡಿಮೆ ಕಾರ್ಬೊಹೈಡ್ರೇಟ್ ಯುಕ್ತ ಆಹಾರವನ್ನ ಸೇವಿಸುವುದರಿಂದ ದೇಹ ಶಕ್ತಿಯನ್ನ ಕಳೆದುಕೊಳ್ಳುತ್ತದೆ.
ಹಾಗೆಯೇ ಫೈಬರ್ ಯುಕ್ತ ಆಹಾರ ನಮ್ಮ ಜೀರ್ಣಕ್ರಿಯೆಗೆ ಅತ್ಯಂತ ಮುಖ್ಯ. ಆದರೆ ಸೆಲ್ಫ್ ಡಯಟ್ ಮಾಡುತ್ತಾ ಫೈಬರ್ ಯುಕ್ತ ಆಹಾರವನ್ನ ಕಡೆಗಣಿಸುವುದರಿಂದ ಕಾನ್ ಸ್ಟಿಪೇಶನ್ ನಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯೂ ಉಲ್ಬಣವಾಗಿ ಆರೋಗ್ಯ ಕೆಡುತ್ತದೆ.