ಅಕ್ಟೋಬರ್ ತಿಂಗಳು ದೇಶೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಉತ್ತಮವಾಗಿದೆ. ವಾಹನ ಮಾರಾಟದಲ್ಲಿ ಜಿಗಿತ ಕಂಡುಬಂದಿದೆ. ಮಧ್ಯಮ ಗಾತ್ರದ ಕಾರುಗಳು ಮತ್ತು ಎಸ್ಯುವಿಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.
ಮಾರುತಿ ಸುಜುಕಿ, ಮಹೀಂದ್ರಾ, ಕಿಯಾ ಇಂಡಿಯಾ, ಹೋಂಡಾ ಕಾರ್ಸ್ ಇಂಡಿಯಾ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಉತ್ತಮ ವಹಿವಾಟು ನಡೆಸಿವೆ, ಇವುಗಳ ಪೈಕಿ ಮಾರುತಿ ಸುಜುಕಿ ಮತ್ತೆ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಂಪನಿ ಎನಿಸಿಕೊಂಡಿದೆ.
ಮಾರುತಿ ಸುಜುಕಿ ಇಂಡಿಯಾದ ದೇಶೀಯ ಮಾರಾಟವು ಕಳೆದ ತಿಂಗಳಲ್ಲಿ ಶೇ.26 ರಷ್ಟು ಏರಿಕೆಯಾಗಿದೆ. 1,47,072 ಯುನಿಟ್ಗಳನ್ನು ಇದು ಮಾರಾಟ ಮಾಡಿದೆ. ಒಂದು ವರ್ಷದ ಹಿಂದೆ ಅಂದರೆ ಅಕ್ಟೋಬರ್ 2021 ರಲ್ಲಿ ಕಂಪನಿಯು 1,17,013 ಯುನಿಟ್ಗಳನ್ನು ಮಾರಾಟ ಮಾಡಿತ್ತು.
ಮಾರುತಿಯ ನಂತರದ ಸ್ಥಾನ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನದ್ದು. ಇದು ಕಳೆದ ತಿಂಗಳು 48,001 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.29.6ರಷ್ಟು ಪ್ರಗತಿ ಸಾಧಿಸಿದೆ. ಅಕ್ಟೋಬರ್ 2021 ರಲ್ಲಿ ಹುಂಡೈ ಕಂಪನಿಯ 37,021 ವಾಹನಗಳು ಮಾರಾಟವಾಗಿದ್ದವು. ದೇಶೀಯ ವಾಹನ ಕಂಪನಿ ಟಾಟಾ ಮೋಟಾರ್ಸ್ 45,423 ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಕಂಪನಿಯ ಮಾರಾಟವು ವರ್ಷದಿಂದ ವರ್ಷಕ್ಕೆ 33 ಪ್ರತಿಶತದಷ್ಟು ಬೆಳೆದಿದೆ. ಮಹೀಂದ್ರಾ & ಮಹೀಂದ್ರಾದ ದೇಶೀಯ ಪ್ರಯಾಣಿಕ ವಾಹನ ಮಾರಾಟವು ಉತ್ತಮ ಜಿಗಿತವನ್ನು ಕಂಡಿದೆ. ಕಳೆದ ತಿಂಗಳು, ಕಂಪನಿಯ ಮಾರಾಟವು 60 ಪ್ರತಿಶತದಷ್ಟು ಹೆಚ್ಚಾಗಿದೆ.ಅಕ್ಟೋಬರ್ನಲ್ಲಿ 32,298 ಯುನಿಟ್ಗಳು ಸೇಲ್ ಆಗಿವೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕೇವಲ 20,130 ಯುನಿಟ್ಗಳು ಬಿಕರಿಯಾಗಿದ್ದವು.
ಅಕ್ಟೋಬರ್ ತಿಂಗಳಿನಲ್ಲಿ ಕಿಯಾ ಇಂಡಿಯಾದ ಮಾರಾಟ ಕೂಡ ವಾರ್ಷಿಕವಾಗಿ ಶೇ.43 ರಷ್ಟು ಬೆಳವಣಿಗೆಯಾಗಿದೆ. 23,323 ಕಿಯಾ ಕಾರುಗಳು ಮಾರಾಟವಾಗಿವೆ. ಹೋಂಡಾ ಕಾರ್ಸ್ ಇಂಡಿಯಾ ಕೂಡ ಉತ್ತಮ ವಹಿವಾಟು ನಡೆಸಿದೆ. 9,543 ಯುನಿಟ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕಂಪನಿಯು 8,108 ಯುನಿಟ್ಗಳನ್ನು ಮಾರಾಟ ಮಾಡಿತ್ತು.