ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಯೊಂದು ಕೃತ್ಯಕ್ಕೂ ಶಿಕ್ಷಕ ಅಥವಾ ಮುಖ್ಯೋಪಾಧ್ಯಾಯರನ್ನು ದೂಷಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 17 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಆತ್ಮಹತ್ಯೆಯಂತಹ ಘಟನೆಗಳು ನಡೆದಾಗ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪೋಷಕರು, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರನ್ನು ಮಾತ್ರ ದೂಷಿಸುವಂತಿಲ್ಲ” ಎಂದು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಅವರ ಪೀಠವು ಹೇಳಿದೆ. ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರು ದೈಹಿಕ ಶಿಕ್ಷೆ ವಿಧಿಸಿದ್ದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬಹುದು. ಯಾಕೆಂದರೆ ದೈಹಿಕ ಶಿಕ್ಷೆಯನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿದೆ.
“ಎಲ್ಲಾ ಸಂದರ್ಭಗಳಲ್ಲೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಮಾನಹಾನಿ ಮಾಡುವ ಅಭ್ಯಾಸವನ್ನು ಒಪ್ಪಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ತಮ್ಮ ದುರ್ನಡತೆ, ಅನುಚಿತ ವರ್ತನೆ ಅಥವಾ ಇನ್ನಾವುದೇ ರೀತಿಯಲ್ಲಿ ತಪ್ಪು ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳ ಮೂಲಕ ದೃಢಪಟ್ಟರೆ ಮಾತ್ರ ಜವಾಬ್ದಾರರಾಗಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
17 ವರ್ಷದ ಸರ್ಕಾರಿ ಶಾಲಾ ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 2017 ರಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರ ‘ಚಿತ್ರಹಿಂಸೆ’ಯಿಂದಾಗಿಯೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10 ಲಕ್ಷ ಪರಿಹಾರದ ಜೊತೆಗೆ ಶಾಲೆ ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರು “ಸಾರ್ವಜನಿಕವಾಗಿ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸುತ್ತಿದ್ದರು. ಬ್ಲೇಡ್‌ನಿಂದ ಅವರ ಪ್ಯಾಂಟ್ ಹರಿದು ಹಾಕುತ್ತಿದ್ದರು. ಅಸಹ್ಯ ಭಾಷೆಯಲ್ಲಿ ನಿಂದಿಸುತ್ತಾ ಅವರನ್ನು ನಿರ್ದಯವಾಗಿ ಥಳಿಸುತ್ತಿದ್ದರು ” ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ಮಗನೂ ಸಹ ಅಂತಹ ಕೆಟ್ಟ ಚಿಕಿತ್ಸೆಗೆ ಒಳಗಾಗಿದ್ದಾನೆ, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ತಾಯಿಯ ಆರೋಪ. ಆದರೆ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಇಲಾಖೆಯನ್ನು ಪ್ರತಿನಿಧಿಸುವ ವಿಶೇಷ ಸರ್ಕಾರಿ ಅರ್ಜಿದಾರರು ಈ ಆರೋಪಕ್ಕೆ ಆಕ್ಷೇಪಣೆ ಸಲ್ಲಿಸಿದರು.
ವಿಚಾರಣೆಯಲ್ಲಿ ಮುಖ್ಯೋಪಾಧ್ಯಾಯರು ಶಾಲೆಯಲ್ಲಿನ ಮಕ್ಕಳಲ್ಲಿ ಶಿಸ್ತು ಕಾಪಾಡುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳ ಹೇರ್ ಕಟಿಂಗ್‌ಗೆ ಮುಖ್ಯೋಪಾಧ್ಯಾಯರು ತಾವೇ ಹಣ ಪಾವತಿಸುತ್ತಿದ್ದುದು ಬಯಲಾಗಿದೆ. ಚೆನ್ನೈನ ಶಾಲಾ ಶಿಕ್ಷಣ ನಿರ್ದೇಶಕರ ಆದೇಶದ ಮೇರೆಗೆ ಅಧಿಕಾರಿಗಳು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದರು. ಈ ವೇಳೆ ಮಹಿಳೆಯ ಆರೋಪ ನಿರಾಧಾರ ಎಂಬುದು ಪತ್ತೆಯಾಗಿದೆ.
ಘಟನೆಯ ಬಗ್ಗೆ ಪ್ರತ್ಯೇಕ ವಿಚಾರಣೆ ಮತ್ತು ತನಿಖೆ ನಡೆದಿದೆ. ಮೃತ ವಿದ್ಯಾರ್ಥಿ ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಿರಲಿಲ್ಲ ಎಂಬುದು ದೃಢಪಟ್ಟಿದೆ. ಆತನ ಸಾವಿಗೂ ಶಿಕ್ಷಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಸಾಕ್ಷ್ಯವಿಲ್ಲದೆ ದೂಷಿಸುವುದು ಶಾಲೆಯ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದೇ ಶಾಲೆಯಲ್ಲಿ ಓದುತ್ತಿರುವ ಇತರ ಮಕ್ಕಳ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆದ್ದರಿಂದ ಆರೋಪಗಳಿಗೆ ಸ್ವೀಕಾರಾರ್ಹ ಪುರಾವೆಗಳನ್ನು ನೀಡಬೇಕು ಎನ್ನುವ ಮೂಲಕ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ.