ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ಮೇಳ ಆಯೋಜಿಸಲಾಗಿದ್ದು, ಆದರೆ ಚರ್ಮ ಗಂಟು ರೋಗದ ಕಾರಣಕ್ಕೆ ಜಾನುವಾರು ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ರೈತರಿಗೆ ನಿರಾಸೆಯಾಗಿದ್ದರೂ ಸಹ ಮೇಳದಲ್ಲಿರುವ ವಿದೇಶಿ ಹಾಗೂ ದೇಶಿಯ ಕುರಿ ತಳಿಗಳು ಅವುಗಳ ಬೆಲೆ ಹಾಗೂ ವಿಶೇಷತೆ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿವೆ.
ಹೌದು, ಇಲ್ಲಿರುವ ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್ ಕುರಿ ತಳಿ ಬೆಲೆ 6 ಲಕ್ಷ ರೂಪಾಯಿಗಳೆಂದು ಹೇಳಲಾಗಿದೆ. ಅಲ್ಲದೆ ಮತ್ತೊಂದು ತಳಿ ಡುಂಬ ಕುರಿ ಬೆಲೆ 2 ಲಕ್ಷ ರೂಪಾಯಿಗಳಾಗಿದೆ. ಅಲ್ಲದೆ ಬಂಡೂರ ಕುರಿಯೂ ಮೇಳದಲ್ಲಿದ್ದು, ಮರಿಗೆ 15 ರಿಂದ 20 ಸಾವಿರ ರೂಪಾಯಿ ಹಾಗೂ ದೊಡ್ಡ ಗಾತ್ರದ ಕುರಿಗೆ 80 ರಿಂದ 90 ಸಾವಿರ ರೂಪಾಯಿ ತನಕ ಬೆಲೆ ಇದೆ.
ಡಾರ್ಪರ್, ಉತ್ಕೃಷ್ಟ ಕುರಿ ತಳಿಯಾಗಿದ್ದು, ಇವುಗಳಿಗೆ ಕೊಂಬು ಇರುವುದಿಲ್ಲ. ಜೊತೆಗೆ ದೇಹಾಕೃತಿ ಉದ್ದನೆಯದಾಗಿದ್ದು ಕೂದಲು ಕಡಿಮೆ ಇರುತ್ತದೆ. ಕುರಿ ಬೆಳೆದಂತೆಲ್ಲ ಕೂದಲು ಉದುರಿ ಹೋಗುತ್ತದೆ ಎಂದು ಕುರಿ ಸಾಕಾಣಿಕೆದಾರ ಸತೀಶ್ ತಿಳಿಸಿದ್ದಾರೆ.