ನವದೆಹಲಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಲಾಹೋರ್ ನಿಂದ ಇಸ್ಲಾಮಾಬಾದ್ಗೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.
ಇಮ್ರಾನ್ ಖಾನ್ ಗುರುವಾರ ವಜೀರಾಬಾದ್ ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 6 ಜನರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಇಮ್ರಾನ್ ಖಾನ್ ಗುರುವಾರ ವಜೀರಾಬಾದ್ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಇದೇ ವೇಳೆ ಇಮ್ರಾನ್ ಖಾನ್ ಅವರ ಕಂಟೈನರ್ ಬಳಿ ಗುಂಡಿನ ದಾಳಿ ನಡೆಸಲಾಯಿತು. ಈ ಘಟನೆಯಲ್ಲಿ ಗುಂಡು ತಗುಲಿ ಇಮ್ರಾನ್ ಖಾನ್ ಗಾಯಗೊಂಡಿದ್ದರು. ಅವರ ಆಪ್ತ ಸಹಾಯಕರಾದ ಇಮ್ರಾನ್ ಇಸ್ಮಾಯಿಲ್, ಫೈಸಲ್ ಜಾವೇದ್ ಸೇರಿದಂತೆ 5 ಬೆಂಬಲಿಗರಿಗೂ ಗುಂಡು ಹಾರಿಸಲಾಗಿದ್ದು, ಅವರೂ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಇಮ್ರಾನ್ ಖಾನ್ ಬೆಂಬಲಿಗರು ಅವರನ್ನು ಬುಲೆಟ್ ಪ್ರೂಫ್ ಕಾರಿನಲ್ಲಿ ಹಾಕಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಅವರು ಗಾಯಗೊಂಡಿದ್ದರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಗೊಂಡಿದ್ದ ಇಮ್ರಾನ್ ಖಾನ್ ಅವರ ಬೆಂಬಲಿಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.