ಹಸಿದ ಮೊಸಳೆಯೊಂದು ಬೇಟೆಯನ್ನು ಹುಡುಕುತ್ತಾ ಮನೆಯೊಳಕ್ಕೇ ಬಂದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾದಲ್ಲಿ ಅಕ್ಟೋಬರ್ 29 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಜೈತಿಯಾ ಗ್ರಾಮದಲ್ಲಿನ ಹರ್ನಾಮ್ ಸಿಂಗ್ ಅವರ ಕುಟುಂಬವು ಗಾಢ ನಿದ್ದೆಯಲ್ಲಿದ್ದಾಗ ಅವರು ಸಾಕಿದ ಆಡುಗಳ ವಿಚಿತ್ರ ಶಬ್ದ ಮಾಡಿದವು. ಇದರಿಂದ ಗಾಬರಿಗೊಂಡ ಕುಟುಂಬ ಮಧ್ಯರಾತ್ರಿ ಎದ್ದು ನೋಡಿದಾಗ ಮೇಕೆಗಳ ಬಳಿ ಎಂಟು ಅಡಿ ಉದ್ದದ ಮೊಸಳೆಯನ್ನು ಕಂಡುಕೊಂಡರು.
ಅವರು ಬೆಚ್ಚಿಬೀಳುವಷ್ಟರಲ್ಲಿಯೇ ಮೊಸಳೆಯು ಅವರ ಮನೆಯ ಒಳಗೆ ಹೋಯಿತು. ಕುಟುಂಬಸ್ಥರು ಹೊರಗಡೆ ಬಂದು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಮೊಸಳೆ ಮನೆಯೊಳಕ್ಕೆ ಇರುವಾಗಲೇ ಬೀಗ ಹಾಕುವಂತೆ ಹೇಳಿದರು.
ಮಳೆಯೊಳಗೆ ಮೊಸಳೆಯನ್ನಿಟ್ಟು ಇಡೀ ರಾತ್ರಿ ಕುಟುಂಬಸ್ಥರು ಹೊರಗಡೆ ಕಳೆದಿದ್ದಾರೆ. ಮರುದಿನ ಬೆಳಗಿನ ಜಾವ ವನ್ಯಜೀವಿ ಇಲಾಖೆ ಘಟನಾ ಸ್ಥಳಕ್ಕೆ ಆಗಮಿಸಿ ಅದನ್ನು ಸೆರೆ ಹಿಡಿದಿದ್ದು, ವನ್ಯಜೀವಿ ವಿಭಾಗದ ತಜ್ಞ ಡಾ ಆಶಿಶ್ ತ್ರಿಪಾಠಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ರಾತ್ರಿ ಕುಟುಂಬಸ್ಥರು ಕಿರುಚಿಕೊಂಡಿದ್ದ ಹಿನ್ನೆಲೆಯಲ್ಲಿ ಇಡೀ ಗ್ರಾಮದ ಜನರು ಬೆಚ್ಚಿಬಿದ್ದಿದ್ದರು. ಎಲ್ಲರೂ ಒಟ್ಟಿಗೇ ಸೇರಿ ಮೊಸಳೆಗಾಗಿ ಜಾಗರಣೆ ಮಾಡಬೇಕಾಯಿತು ! ಮೊಸಳೆಯನ್ನು ನಂತರ ಅದರ ಆವಾಸಸ್ಥಾನಕ್ಕೆ ಬಿಡಲಾಯಿತು.