ಕೆಲವೊಮ್ಮೆ ಏನೇನೋ ಪವಾಡಗಳು ಸಂಭವಿಸುತ್ತವೆ ಮತ್ತು ನಾವು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿಯೂ ನೋಡುತ್ತೇವೆ. ಅಂಥದ್ದೇ ಒಂದು ಪವಾಡ ನವಜಾತ ಶಿಶುವೊಂದರ ವಿಷಯದಲ್ಲಿ ನಡೆದಿದ್ದು, ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್ ನಲ್ಲಿ ಏಳು ತಿಂಗಳಿಗೆ ಹುಟ್ಟಿದ ಮಗುವೊಂದರ ಹೃದಯವು 17 ನಿಮಿಷಗಳ ಕಾಲ ಬಡಿಯುವುದನ್ನು ನಿಲ್ಲಿಸಿದರೂ ಮಗು ಬದುಕಿರುವ ವಿಚಿತ್ರ ಹಾಗೂ ಅಚ್ಚರಿಯ ಘಟನೆ ಇದಾಗಿದೆ.
ಮಗುವಿನ ತಾಯಿ ಬೆಥನಿ ಹೋಮರ್, 26 ವಾರಗಳು ಮತ್ತು ಮೂರು ದಿನಗಳಿಗೆ ಮಗುವನ್ನು ಹೆತ್ತಳು, ಸಿಸೇರಿಯನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಮಗುವನ್ನು ತೆಗೆದಾಗ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಇದ್ದವು. ಏಕೆಂದರೆ ಶಸ್ತ್ರಚಿಕಿತ್ಸೆಯ ವೇಳೆ ತುಂಬಾ ತೊಂದರೆಯುಂಟಾಗಿತ್ತು ಮಾತ್ರವಲ್ಲದೇ ಮಗುವಿನ ಹೃದಯದ ಬಡಿತ ಕೂಡ ಕೇಳಿಸುತ್ತಿರಲಿಲ್ಲ.
ಜನನದ ಸಮಯದಲ್ಲಿ ಮಗುವಿನ ತೂಕ ಕೇವಲ 750 ಗ್ರಾಂ ಇತ್ತು. 17 ನಿಮಿಷಗಳ ಕಾಲ ಉಸಿರಾಟ ಕೂಡ ನಿಂತುಹೋಗಿತ್ತು. ಆದರೂ ವೈದ್ಯರು ಕೈಚೆಲ್ಲಲಿಲ್ಲ. ಮಗುವನ್ನು ಬದುಕಿಸಲು ರಕ್ತಪೂರಣವನ್ನು ನೀಡಲಾಯಿತು. ನಂತರ 17 ನಿಮಿಷಗಳ ಬಳಿಕ ಮಗುವಿನ ಹೃದಯ ಬಡಿತ ಶುರುವಾಗಿದೆ. 112 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಈಗ ಆರೋಗ್ಯದಿಂದ ಇರುವುದಾಗಿ ವೈದ್ಯರು ಹೇಳಿದ್ದು, ಇದೊಂದು ರೀತಿಯ ಪವಾಡ ಎಂದಿದ್ದಾರೆ.