ಪ್ರಕೃತಿಯ ನಿಯಮಗಳೇ ವಿಸ್ಮಯ. ಯಾವುದ್ಯಾವುದಕ್ಕೆ ಸಂಬಂಧ ಇಟ್ಟಿರುತ್ತಾನೋ ಆ ದೇವರು ಎನ್ನುವುದನ್ನು ತಿಳಿದುಕೊಂಡಷ್ಟೂ ಕುತೂಹಲವೇ. ಎತ್ತಣ ಮಾಮರ….. ಎತ್ತಣ ಕೋಗಿಲೆ ಎಂದೋ ಎತ್ತಣ ಬೆಟ್ಟದ ಮೇಲಿನ ನೆಲ್ಲಿ, ಎತ್ತಣ ಸಮುದ್ರದ ಉಪ್ಪು ಎಂದೋ ಕುತೂಹಲದ ಸಂಬಂಧದ ಕುರಿತು ಮಾತನಾಡುವುದು ಇದೆ. ಅದೇ ರೀತಿಯ ಕುತೂಹಲದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಸಾಮಾನ್ಯವಾಗಿ ಡೇರೆ ಹೂವು (ಇದನ್ನು ಡೇಲಿಯಾ ಎಂದೂ ಕರೆಯಲಾಗುತ್ತದೆ) ಕೆಲ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇದನ್ನು ಬೆಳೆಯುವವರು ಕೂಡ ಇಂಥದ್ದೊಂದು ಅಪರೂಪದ ದೃಶ್ಯ ನೋಡಿರಲಿಕ್ಕಿಲ್ಲ. ಡೇರಿ ಹೂವುಗಳ ಗುಂಪಿನಿಂದ ಕಪ್ಪೆಗಳ ಗುಂಪು ಇಣುಕಿ ನೋಡುವ ವಿಡಿಯೋ ಇದಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಡೇರೆ ಹೂವುಗಳ ಎಸಳುಗಳ ನಡುವೆ ಕಪ್ಪೆಗಳು ಇಣುಕಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಇದಾಗಲೇ ಏಳು ದಶಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ಇಷ್ಟಪಟ್ಟಿದ್ದು, ತಾವು ಡೇರೆ ಹೂವುಗಳನ್ನು ದಿನವೂ ನೋಡುತ್ತಿದ್ದರೂ ಈ ಅದ್ಭುತ ಮಾತ್ರ ಇದೇ ಮೊದಲು ನೋಡುತ್ತಿರುವುದು ಎಂದು ಕಮೆಂಟ್ ಹಾಕುತ್ತಿದ್ದಾರೆ.
ಡೇರೆ ಹೂವಿನಲ್ಲಿ ಬಗೆಬಗೆ ಬಣ್ಣಗಳಿದ್ದು, ಇಲ್ಲಿರುವ ಡೇರೆ ಹೂವು ಗಾಢ ಗುಲಾಬಿ ಬಣ್ಣದ್ದಾಗಿದೆ. ಸಾಮಾನ್ಯವಾಗಿ ಮಳೆಗಾಲದ ವೇಳೆ ಇವು ಹೆಚ್ಚಿನ ಹೂವುಗಳನ್ನು ಬಿಡುತ್ತವೆ. ನಮ್ಮ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕಾಣುವ ಈ ಡೇರೆ ಹೂವುಗಳ ಮೇಲೆಯೂ ಇದೇ ರೀತಿ ಕಪ್ಪೆಗಳಿಗೆ ಪ್ರೀತಿಯೇ ಎನ್ನುವುದನ್ನು ನೋಡಬೇಕಿದೆ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಒಟ್ಟಿನಲ್ಲಿ ಈ ಹೂವಿನ ಮೇಲೆ ಕಪ್ಪೆಗಳಿಗೆ ಅದ್ಯಾಕೆ ಇಷ್ಟು ಮೋಹ ಎನ್ನುವುದನ್ನು ನಿಸರ್ಗವೇ ಉತ್ತರಿಸಬೇಕಿದೆ.