ಭಾನುವಾರ ಸಂಜೆ ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದ ಪರಿಣಾಮ 134 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಹಲವರನ್ನು ಮೊರ್ಬಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಗಾಯಾಳುಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ನರೇಂದ್ರ ಮೋದಿಯವರು ಮೊರ್ಬಿ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತರಾತುರಿಯಲ್ಲಿ ರಾತ್ರೋರಾತ್ರಿ ಸುಣ್ಣ ಬಣ್ಣ ಮಾಡಿಸಿದ್ದು, ರೋಗಿಗಳಿಗೆ ಹೊಚ್ಚಹೊಸ ಹೊದಿಕೆಗಳನ್ನು ನೀಡಲಾಗಿದೆ. ಅಲ್ಲದೆ ಹಾಳಾಗಿದ್ದ ವಾಟರ್ ಫಿಲ್ಟರ್ ಗಳನ್ನು ಬದಲಾಯಿಸಲಾಗಿದೆ.
ಜಿಲ್ಲಾಡಳಿತದ ಈ ತರಾತುರಿಯ ಸಿದ್ಧತೆಗೆ ವ್ಯಂಗ್ಯವಾಡಿರುವ ಆಮ್ ಆದ್ಮಿ ಪಕ್ಷ, 27 ವರ್ಷಗಳಿಂದ ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರಧಾನಿಯವರ ಫೋಟೋ ಶೂಟ್ ಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮಧ್ಯರಾತ್ರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಪ್ರತಿಪಕ್ಷ ಕಾಂಗ್ರೆಸ್ ಕೂಡ ಜಿಲ್ಲಾಡಳಿತದ ಈ ನಡೆಯನ್ನು ಟೀಕಿಸಿದ್ದು, ಇಷ್ಟು ಜನ ಮೃತಪಟ್ಟಿದ್ದರೂ ಇವರಿಗೆ ಯಾವುದೇ ನಾಚಿಕೆ ಇಲ್ಲ. ಪ್ರಧಾನಿಯವರ ಚಿತ್ರಗಳಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ಇವರು ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟೀಕಿಸಿದೆ.