ನವೆಂಬರ್ 1ರ ಇಂದಿನಿಂದ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗುತ್ತಿದ್ದು, ಇದು ಜನಸಾಮಾನ್ಯರ ದೈನಂದಿನ ಚಟುವಟಿಕೆ ಹಾಗೂ ಹಣಕಾಸು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಮುಂದೆ ಗೃಹಬಳಕೆ ಸಿಲಿಂಡರ್ ಡೆಲಿವರಿ ಪಡೆಯುವ ವೇಳೆ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ನೀಡಬೇಕಾಗುತ್ತದೆ. ಈಗಾಗಲೇ ಇದು ಹಲವು ನಗರಗಳಲ್ಲಿ ಜಾರಿಯಲ್ಲಿದ್ದರೂ ಇಂದಿನಿಂದ ಎಲ್ಲಾ ಕಡೆಯೂ ಕಡ್ಡಾಯವಾಗಲಿದೆ.
ಅದೇ ರೀತಿ ವಿಮಾ ಪಾಲಿಸಿ ಮಾಡಿಸುವವರು ಹಾಗೂ ಕ್ಲೈಮ್ ಮಾಡುವವರು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ.
ಕ್ರಿಪ್ಟೋ ಕರೆನ್ಸಿಗೆ ಬದಲಿಯಾಗಿ ಸರ್ಕಾರ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಇಂದಿನಿಂದ ಜಾರಿಗೊಳಿಸಿದ್ದು, ಆರಂಭಿಕ ಹಂತದಲ್ಲಿ ಇದು ಸರ್ಕಾರದ ವಹಿವಾಟುಗಳಿಗೆ ಮಾತ್ರ ಬಳಕೆಯಾಗಲಿದೆ.
ಇಂದಿನಿಂದ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಆಗುತ್ತಿದ್ದು, ಈ ಮೊದಲು ಅದನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಇದೀಗ ನವೆಂಬರ್ 1ರಿಂದ ಅನ್ವಯವಾಗಲಿದೆ.
ಇನ್ನು ತೆರಿಗೆದಾರರು ಜಿಎಸ್‌ಟಿ ಪಾವತಿಸುವ ವೇಳೆ ನಾಲ್ಕು ಅಂಕೆಗಳ ಎಚ್ ಎಸ್ ಎನ್ ಕೋಡ್ ನಮೂದಿಸುವುದು ಕಡ್ಡಾಯವಾಗಿದೆ. 5 ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ ಜಿಎಸ್‌ಟಿ ಪಾವತಿಸುವ ವಾಣಿಜ್ಯ – ಉದ್ದಿಮೆಗಳಿಗೆ ಇದು ಅನ್ವಯವಾಗಲಿದೆ.