ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಜೆ ನಡೆದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಇದರ ಮಧ್ಯೆ ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ.
ಶತಮಾನಗಳಷ್ಟು ಹಳೆಯದಾದ ಈ ಸೇತುವೆಯನ್ನು ದುರಸ್ತಿಗೊಳಿಸಲು ಏಳು ತಿಂಗಳ ಹಿಂದೆ ಮುಚ್ಚಿದ್ದು, ಸ್ಥಳೀಯಾಡಳಿತ ಗುತ್ತಿಗೆಯನ್ನು ಒರೆವಾ ಗ್ರೂಪ್ ಕಂಪನಿಗೆ ನೀಡಿತ್ತು. ಗುತ್ತಿಗೆ ನೀಡುವ ಸಂದರ್ಭದಲ್ಲಿ ದುರಸ್ತಿ ಕಾರ್ಯ ಮುಗಿದ ಬಳಿಕ ಕಚೇರಿಗೆ ಮಾಹಿತಿ ನೀಡಬೇಕು ಹಾಗೂ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಗಿತ್ತು ಎನ್ನಲಾಗಿದೆ.
ಆದರೆ ತೂಗು ಸೇತುವೆಯ ದುರಸ್ತಿ ಕಾರ್ಯ ಮುಗಿದ ಬಳಿಕ ಕಂಪನಿ ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಅಲ್ಲದೆ ಐದು ದಿನಗಳ ಹಿಂದೆ ಇದನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಇದೀಗ ದೊಡ್ಡ ದುರಂತವೊಂದು ನಡೆದುಹೋಗಿದೆ.
ಭಾನುವಾರ ರಜಾ ದಿನವಾದ ಕಾರಣ ಸೇತುವೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ತೂಗು ಸೇತುವೆಯ ಮೇಲೂ ನೂರಾರು ಸಂಖ್ಯೆಯಲ್ಲಿ ಜನರಿದ್ದರು. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ತೂಗು ಸೇತುವೆ ಕುಸಿದ ಕಾರಣಕ್ಕೆ ಈವರೆಗೆ 140ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.