ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾನುವಾರದಂದು ಈ ಘೋರ ದುರಂತ ಸಂಭವಿಸಿದ್ದು, ಆಘಾತಕಾರಿ ಸಂಗತಿ ಎಂದರೆ ಶತಮಾನದಷ್ಟು ಹಳೆಯದಾದ ಈ ತೂಗು ಸೇತುವೆ ಆರು ತಿಂಗಳ ಹಿಂದೆ ನವೀಕರಣಕ್ಕಾಗಿ ಮುಚ್ಚಲಾಗಿದ್ದು, ನಾಲ್ಕು ದಿನಗಳ ಹಿಂದಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿತ್ತು ಎನ್ನಲಾಗಿದೆ.
ಮುಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ತೂಗು ಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿದ್ದು, ರಜಾ ದಿನವಾಗಿದ್ದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಸೇತುವೆ ಮೇಲಿದ್ದರು. ಸೇತುವೆ ಕುಸಿಯುತ್ತಿದ್ದಂತೆ ನದಿಯಲ್ಲಿ ಬಿದ್ದು ಹಲವರು ಕೊಚ್ಚಿ ಹೋದರೆ ಮತ್ತಷ್ಟು ಜನ ಹಗ್ಗ ಹಿಡಿದು ನೇತಾಡುತ್ತಿದ್ದರು. ದಡದಲ್ಲಿದ್ದ ಸಾರ್ವಜನಿಕರು ಬಹಳಷ್ಟು ಜನರನ್ನು ರಕ್ಷಿಸಿದ್ದಾರೆ.
ಗಾಂಧಿನಗರ, ವಡೋದರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ತಮ್ಮವರನ್ನು ಕಳೆದುಕೊಂಡ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರ ಚಿಕಿತ್ಸೆಗೆ 50,000 ರೂಪಾಯಿ ನೆರವು ಘೋಷಿಸಿದ್ದಾರೆ.