ಬೆಂಗಳೂರು: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ತಮ್ಮ ವಿರುದ್ಧ ಚೆಕ್ ಮೂಲಕ 1.30 ಕೋಟಿ ಹಣ ಪಡೆದ ಬಗ್ಗೆ ಆರೋಪ ಮಾಡಿದ್ದು, ಈ ಕುರಿತು ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಲ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸೈಟ್ ಖರೀದಿ ಮಾಡಲು ಸಾಲ ತೆಗೆದುಕೊಂಡಿರುವುದು ಸತ್ಯ. ವಿವೇಕಾನಂದ ನನ್ನ ಸ್ನೇಹಿತ. ಹಾಗಾಗಿ ಅವರ ಬಳಿ ಸಾಲ ಪಡೆದಿದ್ದು ನಿಜ. ಅವರಿಂದ ಸಾಲ ಪಡೆದು ನಾನು ಮೈಸೂರಿನಲ್ಲಿ ಸೈಟ್ ತೆಗೆದುಕೊಂಡಿದ್ದೇನೆ. ಸಾಲ ಪಡೆಯುವುದು ತಪ್ಪಾ? ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಎನ್.ಆರ್.ರಮೇಶ್ ನನ್ನ ಮೇಲೆ 50 ಕೇಸ್ ದಾಖಲಿಸಿದ್ದಾರೆ. ಎಲ್ಲಾ ಕೇಸ್ ಗಳು ವಜಾ ಆಗಿವೆ. ನಾನು ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಲಿ ಎಂದು ಹೇಳಿದರು.