ನವದೆಹಲಿ- ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪೂರ್ಣಗೊಂಡು ಇದೀಗ ತೆಲಂಗಾಣದಲ್ಲಿ ನಡೆಯುತ್ತಿದೆ. ಸಾವಿರಾರು ಜನರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಇವರ ನಡಿಗೆಯಲ್ಲಿ ನಟಿಯ ಕೈ ಹಿಡಿದು ನಡೆದ ವಿಚಾರ ದೊಡ್ಡ ಮಟ್ಟಿಗೆ ಗ್ರಾಸವಾಗಿದೆ. ಅಷ್ಟೆ ಆಗಿದ್ದರೆ ಸರಿ. ಆದರೆ ಅದೊಂದು ಟೀಕೆಗೂ ಗುರಿಯಾಗಿದೆ. ಬಿಜೆಪಿ ನಾಯಕಿಯೊಬ್ಬರು ಟೀಕೆ ಮಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ಹೌದು, ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಪೂನಂ ಕೌರ್ ಅವರೂ ಕೂಡ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ನಡಿಗೆಯ ವೇಳೆ ಈ ನಟಿಯ ಕೈಯನ್ನು ರಾಹುಲ್ ಹಿಡಿದುಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಇದೀಗ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇವರು ಈ ಶೀರ್ಷಿಕೆ ಹಾಗೂ ಫೋಟೋ ಶೇರ್ ಗೆ ಪೂನಂ ಸೇರಿದಂತೆ ಹಲವು ನಾಯಕರು ಆಕ್ಷೇಪಿಸಿ ತಿರುಗೇಟು ನೀಡಿ ಟ್ವೀಟ್ ಅಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪೂನಂ ಈ ವಿಚಾರವಾಗಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಇದು ನಿಮಗೆ ಸಂಪೂರ್ಣವಾಗಿ ಅವಮಾನ ಮಾಡಿದಂತೆ. ಪ್ರಧಾನಿ ನರೇಂದ್ರ ಮೋದಿಯವರು ಸ್ತ್ರೀ ಶಕ್ತಿಯ ಬಗ್ಗೆ ಮಾತನಾಡಿದ್ದಾರೆ. ಅದು ನಿಮಗೆ ನೆನಪಿರಲಿ. ನಾನು ಜೋಡೋ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವಾಗ ಜಾರಿ ಪಲ್ಟಿಯಾಗುತ್ತಿದ್ದೆ. ರಾಹುಲ್ ಗಾಂಧಿ ನನ್ನ ಕೈ ಹಿಡಿದುಕೊಂಡರು ಎಂದು ಟ್ವೀಟ್ ಮಾಡಿದ್ದಾರೆ.