ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗುಜರಾತ್ನ ವಲ್ಸಾದ್ನ ಅತುಲ್ ನಿಲ್ದಾಣದ ಬಳಿ ಹಸುವಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದರಿಂದಾಗಿ ರೈಲಿನ ಮುಂಭಾಗ ಹಾನಿಗೊಳಗಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 30 ರಂದು ಉದ್ಘಾಟನೆಗೊಂಡ ನಂತರ ಇದು ನಾಲ್ಕನೇ ಬಾರಿಗೆ ಜಾನುವಾರು ಅಪಘಾತಕ್ಕೆ ಒಳಗಾಗಿದೆ. ಈ ರೈಲು ಮಹಾರಾಷ್ಟ್ರದ ಮುಂಬೈನಿಂದ ಗುಜರಾತ್ನ ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಅಪಘಾತದಿಂದ ಯಾವುದೇ ಕಾರ್ಯಾಚರಣೆಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ಈ ರೈಲು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ಚೆನ್ನಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿತ ಆಗುತ್ತದೆ. ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.