ತಮ್ಮ ಜೀವದ ಗೆಳತಿಗೆ ಆಕೆಯ ಬಾಯ್ ಫ್ರೆಂಡ್ ಕೈಕೊಟ್ಟ ಎಂಬ ಕಾರಣಕ್ಕೆ ಆಕೆಯೊಂದಿಗೆ ಇತರೆ ಇಬ್ಬರು ಸ್ನೇಹಿತೆಯರು ವಿಷ ಸೇವಿಸಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದರೆ ಮತ್ತೊಬ್ಬಾಕೆ ಜೀವನ್ಮರಣದ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾಳೆ.
ಇಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು, ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಈ ಮೂವರು ಬಾಲಕಿಯರು ಜೀವದ ಗೆಳತಿಯರಾಗಿದ್ದರು. ಈ ಪೈಕಿ ಒಬ್ಬಾಕೆ ಇಂದೋರ್ ಮೂಲದ ಹುಡುಗನ ಜೊತೆ ಪ್ರೀತಿಗೆ ಬಿದ್ದಿದ್ದಳು.
ಎಲ್ಲ ವಿಷಯವನ್ನು ತನ್ನ ಇಬ್ಬರು ಗೆಳತಿಯರೊಂದಿಗೆ ಈಕೆ ಹಂಚಿಕೊಳ್ಳುತ್ತಿದ್ದು, ಇತ್ತೀಚೆಗೆ ಇಂದೋರ್ ಹುಡುಗ ಬಾಲಕಿ ಜೊತೆ ಸಂಪರ್ಕ ಕಡಿತಗೊಳಿಸಿದ್ದಾನೆ. ಅಲ್ಲದೇ ಮೊಬೈಲ್ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಆತನನ್ನು ಮುಖಾಮುಖಿ ಭೇಟಿ ಮಾಡಿ ಮಾತನಾಡಲು ನಿರ್ಧರಿಸಿದ್ದಾರೆ. ಶುಕ್ರವಾರ ಶಾಲೆಗೆ ಚಕ್ಕರ್ ಹೊಡೆದು 100 ಕಿಲೋಮೀಟರ್ ದೂರದ ಇಂದೋರ್ ಗೆ ತೆರಳಿದ್ದಾರೆ. ಅದಕ್ಕೂ ಮುನ್ನ ಹುಡುಗ ಭೇಟಿಯಾಗದಿದ್ದರೆ ಮೂರು ಜನ ವಿಷ ಕುಡಿಯಲು ತೀರ್ಮಾನಿಸಿ ವಿಷದ ಬಾಟಲಿಯನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.
ಇಂದೋರ್ ಗೆ ತೆರಳಿದ ಇವರುಗಳು ಪಾರ್ಕ್ ಒಂದರಲ್ಲಿ ಕುಳಿತು ಹುಡುಗನಿಗೆ ಕರೆ ಮಾಡಿದ್ದು ಆತ ಭೇಟಿಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಮೊದಲೇ ನಿರ್ಧರಿಸಿದಂತೆ ಮೂವರು ವಿಷ ಸೇವಿಸಿದ್ದು, ಒದ್ದಾಡಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದಾರೆ.
ಮೂವರು ಬಾಲಕಿಯರು ವಿಷ ಕುಡಿದಿರುವ ಘಟನೆ ರಾಜ್ಯದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಬದುಕುಳಿದ ಬಾಲಕಿಯನ್ನು ವಿಚಾರಣೆ ನಡೆಸಿದ ವೇಳೆ ನೈಜ ವಿಚಾರ ಬೆಳಕಿಗೆ ಬಂದಿದೆ. ಈ ಬಾಲಕಿಯೂ ಸಹ ಈಗ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.