ಚೆಂಗಲ್ಪಟ್ಟು (ತಮಿಳುನಾಡು): ವಿದ್ಯುತ್ ಕಂಬ ಮುರಿದು ಮೃತಪಟ್ಟ ಬಾಲಕಿಯನ್ನು ಹೂತುಹಾಕಿದ್ದರೆ, ಕೆಲ ದಿನಗಳ ಬಳಿಕ ಆಕೆಯ ರುಂಡವೇ ನಾಪತ್ತೆಯಾಗಿರುವ ಭಯಾನಕ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕಂ ತಾಲೂಕಿನ ಚಿತ್ತಿರವಾಡಿ ಗ್ರಾಮದಲ್ಲಿ ನಡೆದಿದೆ. 12 ವರ್ಷದ ಬಾಲಕಿ ಕೃತಿಕಾ ತಲೆ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಶಿರಚ್ಛೇದನ ಮಾಡಿರುವುದು ಬೆಳಕಿಗೆ ಬಂದಿದೆ.
ಇದೇ ತಿಂಗಳ 5ರಂದು ಆವೂರಿಮೇಡು ಗ್ರಾಮದ ಅಜ್ಜಿ ಮನೆಗೆ ಹೋಗಿದ್ದ ಬಾಲಕಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು.
14 ರಂದು ಆಕೆಯ ಶವವನ್ನು ಸ್ಮಶಾನದಲ್ಲಿ ಹೂಳಲಾಗಿತ್ತು. ಇದೇ ತಿಂಗಳ 25ರ ಅಮವಾಸ್ಯೆಯ (ಗ್ರಹಣದ) ರಾತ್ರಿ ಸಮಾಧಿ ಸ್ಥಳದಲ್ಲಿ ಅತೀಂದ್ರಿಯ ಪೂಜೆ ನಡೆದ ಕುರುಹುಗಳು ಪತ್ತೆಯಾಗಿದ್ದು, ಬಾಲಕಿಯ ಶವ ನಾಪತ್ತೆಯಾಗಿದೆ ! ಪೂಜೆಯ ಕುರುಹು ತಿಳಿದ ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ನಡೆದ ದಿನ ವಿದ್ಯುತ್ ಕಂಬದ ಮೇಲೆ ವ್ಯಕ್ತಿಯೊಬ್ಬ ಹತ್ತಿದ್ದು, ಇದರಿಂದಾಗಿ ವಿದ್ಯುತ್ ಕಂಬ ನಮ್ಮ ಮಗಳ ಮೇಲೆ ಬಿದ್ದಿದೆ ಎಂದು ಪೋಷಕರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಚಿತ್ತಮೂರು ಪೊಲೀಸರು ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಯತ್ನಿಸಿದರು.
ಇದರಿಂದ ಆ ವ್ಯಕ್ತಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆದ್ದರಿಂದ ಶಿರಚ್ಛೇದನ ಮಾಡಿದ್ದು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.