ತುಮಕೂರು: ಮಕ್ಕಳ ಕಳ್ಳರ ಬಗ್ಗೆ ವದಂತಿ ಹಬ್ಬಿರುವಾಗಲೇ ಶಾಲಾ ಮಕ್ಕಳ ಅಪಹರಣಕ್ಕೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಗೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ ಮೂವರು ಮಕ್ಕಳನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಶಾಲೆಯಿಂದ ವಾಪಸ್ ಆಗುತ್ತಿದ್ದ ಮೂವರು ಮಕ್ಕಳನ್ನು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಅಪಹರಿಸಲು ಯತ್ನಿಸಿದ್ದಾರೆ. ಮಕ್ಕಳನ್ನು ಕಾರಿಗೆ ಹತ್ತಿಸುತ್ತಿದ್ದಾಗ ಮಕ್ಕಳು ಕಿರುಚಿದ್ದಾರೆ. ಮಕ್ಕಳ ಕೂಗಾಟಕ್ಕೆ ಭಯಗೊಂಡ ಅಪಹರಣಕಾರರು ಮಕ್ಕಳನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ರಶ್ಮಿಕಾ, ಲೋಹಿತ್ ಹಾಗೂ ಹರ್ಷಿತಾ ಎಂಬ ಮೂವರು ಮಕ್ಕಳ ಅಪಹರಣಕ್ಕೆ ಅಪರಿಚಿತರ ಗುಂಪು ಯತ್ನಿಸಿದೆ ಎನ್ನಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.