ನಾಲ್ಕು ದಿನಗಳ ಛತ್ ಪೂಜಾ ಹಬ್ಬವನ್ನು ಉತ್ತರ ಭಾರತದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬ ಇದಾಗಿದೆ.
ಈ ಹಬ್ಬವನ್ನು ಸೂರ್ಯ ದೇವರು (ಸೂರ್ಯ ದೇವ್) ಮತ್ತು ಛತ್ತಿ (ಷಷ್ಟಿ) ದೇವಿ ಅಥವಾ ಮೈಯಾ (ತಾಯಿ)ಗೆ ಸಮರ್ಪಿಸಲಾಗಿದೆ. ಇದನ್ನು ವರ್ಷಕ್ಕೆ ಎರಡು ಬಾರಿ ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಮತ್ತು ಇನ್ನೊಂದು ಹಿಂದೂ ಚಂದ್ರನ ಕ್ಯಾಲೆಂಡರ್ನ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಆಚರಿಸಲಾಗುತ್ತದೆ.
ಆದರೆ ರಜೆ ಸಿಗದ ಕಾರಣ, ಹಲವರಿಗೆ ದೂರದ ಊರುಗಳಿಗೆ ಹೋಗುವುದು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಹಲವರು ಹಲವು ರೀತಿಯಲ್ಲಿ ನೋವು ತೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಾರ್ಮಿಕ ದುಃಖ ತೋಡಿಕೊಂಡಿರುವ ಬಗೆ ಮಾತ್ರ ಈಗ ವೈರಲ್ ಆಗಿದೆ.
ಹಬ್ಬದ ಸಮಯದಲ್ಲಿ ಬಸ್, ರೈಲುಗಳು ಸಂಪೂರ್ಣ ರಶ್ ಆಗುತ್ತವೆ, ಹಲವರು ಬಸ್ಗಳನ್ನು ಐದಾರು ಪಟ್ಟು ರೇಟ್ ಮಾಡುವ ಕಾರಣ, ತಿಂಗಳುಗಳ ಮೊದಲೇ ಜನರು ರೈಲಿಗೆ ಟಿಕೆಟ್ ಬುಕ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಾರ್ಮಿಕ ಕೊನೆಯ ಕ್ಷಣದಲ್ಲಿ ರೈಲಿಗೆ ಹೋಗಲು ನೋಡಿದ ಕಾರಣ ಟಿಕೆಟ್ ಸಿಗಲಿಲ್ಲ.
ಇದರಿಂದ ಹತಾಶನಾದ ಕಾರ್ಮಿಕ ಹಾಡಿನ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ನನ್ನ ಬಳಿ ರೈಲಿನ ಟಿಕೆಟ್ ಇಲ್ಲ, ಮನೆಗೆ ಬರಲು ಆಗುವುದಿಲ್ಲ, ಮನೆಯಲ್ಲಿ ಛತ್ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಬೇಸರಿಸುವುದು ಬೇಡ ಅಮ್ಮ, ಈ ಸಮಯದಲ್ಲಿ ತಾನು ದುಡಿಯುವ ಹಣವನ್ನು ಗ್ರಾಮದಲ್ಲಿ ಮನೆ ಕಟ್ಟಲು ಬಳಸುತ್ತೇನೆ ಎನ್ನುವ ಅರ್ಥವುಳ್ಳ ಪದ್ಯವನ್ನು ನೋವಿನಿಂದ ಕಾರ್ಮಿಕ ನುಡಿದಿದ್ದಾನೆ.
ಈತನ ಹಾಡು ಅನೇಕರ ಹೃದಯವನ್ನು ಮುಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ, ಸರ್ಕಾರವು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಹೆಚ್ಚುವರಿ ರಜಾದಿನಗಳಿಗೆ ತೆರಳಬೇಕು ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ. ಈ ಕಾರ್ಮಿಕನಿಗೆ ಹಲವರು ಸಾಂತ್ವನ ಹೇಳಿದ್ದಾರೆ.