ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯನ್ನು ಆಕೆ ಪ್ರಾಪ್ತ ವಯಸ್ಸಿಗೆ ಬಂದ ಕೂಡಲೇ ಮದುವೆಯಾಗುವ ಷರತ್ತು ವಿಧಿಸಿ ಪೋಕ್ಸೋ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಮದುವೆ ನೋಂದಣಿ ಆದ ಬಳಿಕ ಇದರ ದಾಖಲೆಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಪ್ರಕರಣದ ವಿವರ: 22 ವರ್ಷದ ಯುವಕ ತನ್ನ ಸಂಬಂಧಿ 17 ವರ್ಷದ ಬಾಲಕಿಯನ್ನು ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಬಾಲಕಿಯ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಇದರ ಮಧ್ಯೆ ಬಾಲಕಿ ತಾನು ಸ್ವ ಇಚ್ಛೆಯಿಂದ ಆರೋಪಿ ಜೊತೆ ಸಂಬಂಧ ಬೆಳೆಸಿರುವುದಾಗಿ ಹೇಳಿಕೆ ನೀಡಿದ್ದಳು. ಇದನ್ನು ಪರಿಗಣಿಸಿರುವ ನ್ಯಾಯಾಲಯ 17 ವರ್ಷದ ಆಕೆಗೆ ಯಾವುದು ಸರಿ ಯಾವುದು ತಪ್ಪು ಎಂಬುದರ ಅರಿವು ಇರುತ್ತದೆ. ಅಲ್ಲದೆ ಆರೋಪಿ ಕೂಡ ಸಂತ್ರಸ್ತೆ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದಾನೆ ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.